ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಟ್ವಿಟರ್ ಖಾತೆದಾರನನ್ನು ಶನಿವಾರ ಬಂಧಿಸಲಾಗಿದೆ.
ಉಗ್ರನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಂಧಿಸಿದ್ದಾರೆ. ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿಯ ಕೈವಾಡವಿದೆ ಎಂದು ಬ್ರಿಟನ್ ಮೂಲದ ಚಾನೆಲ್ 4′ ನ್ಯೂಸ್ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿತ್ತು.

ಬೆಂಗಳೂರಿನಲ್ಲಿದ್ದು ಕೊಂಡೇ “ಶಮಿವಿಟ್ನೆಸ್” ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದ್ದ ವ್ಯಕ್ತಿಯೋರ್ವ ಟ್ವಿಟರ್ ಮೂಲಕ ದೇಶವಿದ್ರೋಹ ಸಂದೇಶಗಳನ್ನು ಹಾಗೂ ಇಸಿಸ್ ಪರವಾದ ಇಸ್ಲಾಂ ಸೈದ್ಧಾಂತಿಕ ನಿಲುವುಗಳನ್ನು ಪಸರಿಸಿ ವಿಶ್ವಾದಾದ್ಯಂತ ಇಸ್ಲಾಂ ಯುವಕರನ್ನು ತಮ್ಮ ಸಂಘಟನೆಗೆ ಸೇರುವಂತೆ ಪ್ರೇರೇಪಿಸುತ್ತಿದ್ದನು ಎಂದು ವಾಹಿನಿ ಆರೋಪಿಸಿತ್ತಲ್ಲದೆ, ವಾಹಿನಿ ಈಗಾಗಲೇ ಶಮಿ ವಿಟ್ನೆಸ್ ಖಾತೆ ನಿವಎರ್ಹಿಸುತ್ತಿದ್ದ ಮೆಹ್ದೀ ಎಂಬ ವ್ಯಕ್ತಿಯನ್ನು ಸಂದರ್ಶಿಸಿದ್ದು, ಖಾತೆಯ ನಿರ್ವಹಣೆ ಕುರಿತಂತೆ ಆತ ಕೆಲ ವಿಚಾರಗಳನ್ನು ಹೇಳಿದ್ದಾನೆ ಎಂದು ಸುದ್ದಿ ಪ್ರಸಾರದಲ್ಲಿ ಹೇಳಿಕೊಂಡಿತ್ತು.
ಪ್ರಕರಣದ ಕುರಿತಂತೆ ತನಿಖೆ ಕೈಗೊಂಡಿದ್ದ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವ ಸಲುವಾಗಿ ಎನ್ಐಎ ಮತ್ತು ಐಬಿ ಕೇಂದ್ರ ಭದ್ರತಾ ಸಂಸ್ಥೆಗಳನ್ನು ಸಂಪರ್ಕಿಸಿತ್ತು. ಈ ಸಂಸ್ಥೆಗಳ ಸಹಾಯದಿಂದ ಇಂದು ದೇಶವಿದ್ರೋಹಿ ಸಂದೇಶ ರವಾನಿಸುತ್ತಿದ್ದ ಮೆಹ್ದೀಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ರೆಡ್ಡಿ ಇಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಮೆಹ್ದೀ ಮೂಲತಃ ಬೆಂಗಳೂರಿಗನಂತೆ. ಬೆಂಗಳೂರಿನಲ್ಲಿದ್ದುಕೊಂಡೇ ಇಸಿಸ್ ಪರವಾಗಿ ಟ್ವಿಟರ್ ಖಾತೆಯಲ್ಲಿ ಸಂದೇಶಗಳನ್ನು ಬಿತ್ತರಿಸುತ್ತಿದ್ದನು.
ಪ್ರತೀ ತಿಂಗಳು ಈತ ಸುಮಾರು 2 ಮಿಲಿಯನ್ ಪ್ರಚೋದನಕಾರಿ ಸಂದೇಶಗಳನ್ನು ಟ್ವಿಟರ್ ಖಾತೆಗೆ ಹಾಕುತ್ತಿದ್ದನು. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 17, 700 ಮಂದಿ ಖಾತೆಯನ್ನು ಪ್ರತಿ ನಿತ್ಯ ವೀಕ್ಷಿಸುತ್ತಿದ್ದರು ಮತ್ತು ಆಯಾ ದೇಶಗಳ ಕುರಿತ ಸುದ್ದಿ ಸಮಾಚಾರಗಳನ್ನು ಚರ್ಚೆ ನಡೆಸುತ್ತಿದ್ದರು ಎಂದು ಚಾನೆಲ್ 4 ಸುದ್ದಿವಾಹಿನಿ ಹೇಳಿದೆ.
