`ಓದು ಓದು…’ ಒತ್ತಡ ಸರಿಯಲ್ಲ: ಡಾ.ರಿತೇಶ್
ಕೈಕಂಬ: ಮಕ್ಕಳಿಗೆ ಓದು ಓದು ಎಂದು ಒತ್ತಡ ಹೇರುವುದು ಸರಿಯಲ್ಲ. ಇದರಿಂದ ಅವರಿಗೆ ಮಾನಸಿಕ ಹಿಂಸೆಯಾಗುತ್ತದಲ್ಲದೆ, ಓದಿನ ಬಗ್ಗೆ ನಿರಾಸಕ್ತಿ ತಾಳುತ್ತಾರೆ ಎಂದು ಪ್ರಖ್ಯಾತ ವೈದ್ಯ ಡಾ. ರಿತೇಶ್ ಜೋಸೆಫ್ ಡಿ`ಕುನ್ಹಾ ತಿಳಿಸಿದರು.
ಅವರು ಗುರುಪುರ ಕೈಕಂಬದ ರೋಸಾಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವದ ಪ್ರಯುಕ್ತ ಡಿ.10ರ ಬುಧವಾರ ನಡೆದ ಸಭಾ ಕಾರ್ಯಕ್ರಮದಂದು ಮಾತಾಡುತ್ತಿದ್ದರು.

ನಂತರ ಮಾತಾಡಿದ ಅವರು ಮಕ್ಕಳಿಗೆ ಪ್ರೀತಿಯಿಂದ, ಮನದಟ್ಟಾಗುವಂತೆ ವಿದ್ಯೆ ನೀಡಬೇಕು. ನೀಡುವ ವಿದ್ಯೆಯಿಂದ ಅವರಿಗೆ ಯಾವುದೇ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮಾಡಿದ ಪಾಠವನ್ನು ಆಸಕ್ತಿಯಿಂದ ಕೇಳಿದರೆ ಮುಂದೆ ಮಾನಸಿಕ ಒತ್ತಡ ತಂದಿಟ್ಟುಕೊಂಡು ಓದುವ ಪ್ರಮೇಯ ಒದಗುವುದಿಲ್ಲ ಏಕಾಗ್ರತೆಯಿಂದ ಪಾಠ ಆಲಿಸಿ ಎಂದುರಿತೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಪ್ರಯುಕ್ತ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನಡೆದವು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಭಗಿನಿ ಕನ್ಸೆಟ್ಟಾ ಬಿ.ಎಸ್. ವಹಿಸಿದ್ದರು. ನಂತರ ಮತಾಡಿದ ಅವರು ಇಂದು ಇಲ್ಲಿ ಶಾಲೆ ಆರಂಭವಾಗಿ 75 ವರ್ಷಗಳು ಸಂದಿವೆ. ಮೊದಲು 5 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಇಂದು ಸಾವಿರಾರು ಮಂದಿಗೆ ವಿದ್ಯೆ ನೀಡಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಅತಿಥಿಗಳಾಗಿ ಕೈಕಂಬದ ಶ್ರೀರಾಮ್ ಹೋಟೆಲ್ ಮಾಲಕ ಎಂ.ಹರಿ ರಾವ್, ಕತ್ತಲ್ ಸಾರ್ ನ ನಿವೃತ ಮುಖ್ಯ ಶಿಕ್ಷಕರಾದ ಕೆ. ಲಕ್ಷ್ಮಿನಾರಾಯಣ ಉಡುಪ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರೀಟಾ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಶಾಂತಿ ಸ್ವಾಗತಿಸಿದರು. ಬೆನ್ನಿ ಫೆರ್ನಾಂಡಿಸ್ ಹಾಗೂ ಐರಿನ್ ಸೆಲ್ವಾ ಡಿ`ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಲೂಸಿಯಾ ಬರ್ಬೋಜಾ ಧನ್ಯವಾದವಿತ್ತರು. ಕಾರ್ಯಕ್ರಮದ ಕೊನಯಲ್ಲಿ ಮಕ್ಕಳಿಗೆ ಹಬ್ಬದೂಟ ನೀಡಲಾಯಿತು.















