ಕೋಮುಜ್ವಾಲೆಗೆ ತುಪ್ಪ ಸುರಿದರೇ ದುಷ್ಕರ್ಮಿಗಳು?
ಕೈಕಂಬ: ಬಜ್ಪೆ ಠಾಣಾವ್ಯಾಪ್ತಿಯ ಗುರುಪುರ ಕೈಕಂಬದ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಸಂಕೀರ್ಣಗಳು ಬೆಂಕಿಗಾಹುತಿಯಾಗಿ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಉಳಾಯಿಬೆಟ್ಟು ಗಲಭೆಯನ್ನು ಮುಂದಿಟ್ಟುಕೊಂಡು ಪರಿಸ್ಥಿತಿಯ ದುರ್ಲಾಭ ಪಡೆಯಲು ಕಿಡಿಗೇಡಿಗಳು ಬೇಕೆಂದೇ ಬೆಂಕಿ ಇಟ್ಟು ಅಂಗಡಿ ಸುಟ್ಟುಹಾಕಿದ್ದಾರೆಂಬ ಶಂಕೆ ಸ್ವತಃ ಅಂಗಡಿಮಾಲಿಕರಿಂದಲೇ ವ್ಯಕ್ತವಾಗುತ್ತದೆ. ಬೆಂಕಿ ಇಟ್ಟ ಕುರುಹೆಂಬಂತೆ ಸ್ಥಳದಲ್ಲಿ ಸೀಮೆಎಣ್ಣೆ ಡಬ್ಬಿಗಳು ಸ್ಥಳದಲ್ಲಿ ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ. ಅಥವಾ ಶಾಟರ್್ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿರಬಹುದೆಂಬ ಇನ್ನೊಂದು ಶಂಕೆ ವ್ಯಕ್ತವಾಗುತ್ತದೆ.
ಕೈಕಂಬದ ಸ್ಥಳೀಯ ನಿವಾಸಿಗಳಾದ ಎಂ.ಕೆ. ಹಸೈನಾರ್ ಎಂಬವರ ಒಣಮೀನು-ತರಕಾರಿ ಅಂಗಡಿ, ಪರಮೇಶ್ವರ ಜೋಗಿ ಎಂಬವರ ಹಣ್ಣುಹಂಪಲು ಅಂಗಡಿ ಸಂಪೂರ್ಣವಾಗಿ ಭಸ್ಮವಾಗಿದ್ದು, ಮಾಮು ಮಣೇಲ್ ಎಂಬವರ ಎಲ್ಐಸಿ ಇತ್ಯಾದಿ ಸೇವೆಯ ಅಂಗಡಿ ಭಾಗಶಃ ಸುಟ್ಟು ಹೋಗಿದೆ. ಬೆಂಕಿಯಿಂದ ಹಸೈನಾರ್ ಹಾಗೂ ಪರಮೇಶ್ವರ ಜೋಗಿ ಎಂಬಿಬ್ಬರಿಗೆ ಸುಮಾರು ಒಟ್ಟು ಐದು ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 9 ಅಂಗಡಿಗೆ ಬೀಗ ಜಡಿದು ಹೋಗಿದ್ದರು. ಮರುದಿನ ಬೆಳಿಗ್ಗೆ 2.30 ಜಾವ ಅಂಗಡಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿಯ ಕೆನ್ನಾಲಿಗಳು ಊರಿಡೀ ವ್ಯಾಪಿಸಿದ ಬಗ್ಗೆ ಸ್ಥಳಿಯರು ತಕ್ಷಣ ಮಾಹಿತಿ ಪಡೆದು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಕೊನೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಬೇಕಾಯ್ತು. ಇದೇ ವೇಳೆ ಬಜ್ಪೆ ಪೊಲೀಸರೂ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ತಕ್ಷಣ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತಾದರೂ, ಆದರೆ ಅಂಗಡಿ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅಂಗಡಿ ಮಾಲಕ ಎಂ.ಕೆ. ಹಸೈನಾರ್ ಪ್ರಕಾರ ಕಿಡಿಗೇಡಿಗಳು ಅಂಗಡಿಗೆ ಬೇಕೆಂದೇ ಬೆಂಕಿ ಹಚ್ಚಿರಬಹುದು, ಅಂಗಡಿಯ ಹೆಂಚು ತೆಗೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಇದಕ್ಕಾಗಿ ಬಳಸಿದ ಸೀಮೆ ಎಣ್ಣೆ ಡಬ್ಬಿ ಕೂಡಾ ಸಿಕ್ಕಿದ್ದು ಅದನ್ನು ಪೊಲೀಸರ ವಶಕ್ಕೊಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ. ವಿದ್ಯುತ್ ತಂತಿ ಹಾಗೂ ಒಣಗಿದ ಪಕ್ಕಾಸಿನಿಂದಾಗ ಬೆಂಕಿಯ ತೀವ್ರತೆ ಹೆಚ್ಚಿದ್ದು, ಇದರ ಜ್ವಾಲೆ ವ್ಯಾಪಿಸಿದ ಪರಿಣಾಮ ಬೆಂಕಿ ಧಗಧಗ ಉರಿದು ಎಲ್ಲಾ ಸಾಮ್ಗರಿಗಳು ಸುಟ್ಟು ಬೂದಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದರ ಹಿಂದೇ ಎರಡು ಬೃಹತ್ ವಾಣಿಜ್ಯ ಸಂಕೀರ್ಣಗಳು ಇದ್ದು ಬೆಂಕಿಯನ್ನು ನಂದಿಸದೇ ಇರುತ್ತಿದ್ದರೆ ಪರಿಣಾಮ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ನಂದಿಸಲು ಸ್ಥಳೀಯ ಹೋಟೆಲ್ ಸ್ವಾಗತ್ ಕಾರ್ಮಿಕರು ಪೋಲಿಸರೊಂದಿಗೆ ಸೇರಿ ಪ್ರಯತ್ನಿಸದರು . ಬಜ್ಪೆ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಅಂಗಡಿ ಮಾಲಿಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಎಲ್ಲಾ ಅಂಗಡಿಗಳು ಕಂದಾವರ ಪಂಚಾಯತ್ಗೆ ಒಳಪಟ್ಟಿದ್ದಾಗಿದೆ












