ಕೈಕಂಬ: ಮಂಗಳೂರಿನಿಂದ ಗುರುಪುರ ಕೈಕಂಬ, ಮಳಲಿ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಚರಿಸುತ್ತಿರುವ ಸರ್ಕಾರಿ ನರ್ಮ್ ಬಸ್ ಸೇವೆ ನಿರ್ವಿಘ್ನವಾಗಿ ಮುಂದುವರಿಯುವಂತೆ ಸಾರ್ವಜನಿಕರು ಆ. ೫ರಂದು ಮಳಲಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ವರ್ಷ ಮಾರ್ಚ್ ೧೫ರಂದು ಮಂಗಳೂರಿನಿಂದ ಗ್ರಾಮೀಣ ಭಾಗವಾಗಿರುವ ಗುರುಪುರ-ಕೈಕಂಬ, ಅರ್ಬಿ, ನಾಡಾಜೆ, ಜೋಡುತಡಮೆ, ಮಳಲಿ, ಕಾಜಿಲ ಮಾರ್ಗವಾಗಿ ಪೊಳಲಿ ದೇವಸ್ಥಾನವರೆಗೆ ಕೆಎಸ್ಸಾರ್ಟಿಸಿಯ ಈ ಬಸ್ ಸೇವೆ ಆರಂಭಗೊಂಡಿತ್ತು. ಬಸ್‌ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು. ಜು. ೧೩ರವರೆಗೆ ತಾತ್ಕಾಲಿಕ ನೆಲೆಯಲ್ಲಿ ಸೇವೆಯಲ್ಲಿದ್ದ ಬಸ್‌ಗೆ ಖಾಸಗಿ ಬಸ್‌ನವರ ಒತ್ತಡ ಹಾಗೂ ಅಡಚಣೆ ಹಿನ್ನೆಲೆಯಲ್ಲಿ ಜು. ೧೭ರಂದು ಬಸ್ ಸೇವೆ ಸ್ಥಗಿತಗೊಂಡಿತ್ತು. ಸ್ಥಳೀಯ ಕಾಂಗ್ರೆಸ್ ಮುಖಂಡರ ಪ್ರಯತ್ನದ ಫಲವಾಗಿ, ಸ್ಥಗಿತಗೊಂಡ ಮೂರೇ ದಿನದಲ್ಲಿ ನರ್ಮ್ ಬಸ್ ಸೇವೆ ಪುನರಾರಂಭಗೊಂಡಿತ್ತು.

ನಾಡಾಜೆಯಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಾಕಿಮಾರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ, ಎಂಬ ದೋಟದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂದಿರ, ದೇವರಗುಡ್ಡೆಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮಳಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಮಳಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಮಳಲಿ ಮಸೀದಿ, ಮುಲ್ಲಗುಡ್ಡೆ ಶ್ರೀ ದುರ್ಗಾದೇವಿ ಭಜನಾ ಮಂದಿರ ಮತ್ತು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸಂಪರ್ಕದ ಮಂಗಳೂರು-ಮಳಲಿ-ಪೊಳಲಿಗೆ ಈ ರೂಟ್‌ನಲ್ಲಿ ಸಾಕಷ್ಟು ಪ್ರಯಾಣಿಕರಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಸರ್ಕಾರಿ ಬಸ್ ಸೇವೆ ಸ್ಥಗಿತಗೊಳಿಬಾರದು. ಬದಲಾಗಿ ಬಸ್ ಸೇವೆ ಖಾಯಂಗೊಳಿಸಬೇಕು ಎಂದು ಸ್ಥಳೀಯ ಪ್ರಯಾಣಿಕರು ಕೆಎಸ್ಸಾರ್ಟಿಸಿ ಮತ್ತು ಆರ್‌ಟಿಒಗೆ ಮನವಿ ಮಾಡಿರುವುದಲ್ಲದೆ, ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *