ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಮಾತೃ ಭಜನಾ ಮಂಡಳಿಯ ಸಹಯೋಗದೊಂದಿಗೆ ಗ್ರಾಮ ಸುಭೀಕ್ಷೆ ಮತ್ತು ದರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ೧೫ನೇ ವರ್ಷದ ನಗರ ಭಜನೆ ಹಾಗೂ ಮಂಗಳೋತ್ಸವವು ದ.೨೪ರಂದು ಭಾನುವಾರ ನಡೆಯಿತು.

ದ.೨೪ರಂದು ಬೆಳಗ್ಗೆ ಶ್ರೀ ಕ್ಷೇತ್ರದ ಅರ್ಚಕ ರಮೇಶ್ ಪೂಜಾರಿ, ಅರ್ಚಕ ಚಂದ್ರಹಾಸ ಪೂಜಾರಿ, ದೀನಬಂಧು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಜನಾರ್ಧನ ಹೆಚ್.ಎಸ್, ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷ ತಿರುಮಲೇಶ್ ಕುಲಾಲ್, ಆದಿಶಕ್ತಿ ಮಾತೃ ಭಜನಾ ಮಂಡಳಿ ಅಧ್ಯಕ್ಷೆ ಸರಿತಾ ಮಾಧವ, ಗೀತಾ ಚಂದ್ರಹಾಸ ಬೆಳ್ಳೂರು ದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾತ್ರಿ ೯:೦೦ಗಂಟೆಯ ವರೆಗೆ ವಿವಿಧ ಭಜನಾ ತಂಡಳಿಗಳಿಂದ ಭಜನಾ ಸಂಕೀರ್ತನೆ ನಡೆದು ಕೊನೆಗೆ ಶ್ರೀ ಆದಿಶಕ್ತಿ ಕುಣಿತ ಭಜನಾ ತಂಡದ ಮಕ್ಕಳಿಂದ ಕುಣಿತ ಭಜನೆ ನಡೆದು ಭಜನಾ ಮಂಗಳೋತ್ಸವವು ಸಂಪನ್ನಗೊಂಡಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯ ಗೋಪಾಲ ಪೂಜಾರಿ ವಹಿಸಿದ್ದರು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಗಮಿಸಿ ಶುಭಹಾರೈಸಿದರು. ತೆಂಕಬೆಳ್ಳೂರು ಅಜಿನಡ್ಕ ಶ್ರೀರಾಘವೇಂದ್ರ ದೇಗುಲದ ಶ್ರೀ ಶಂಕರ ಸ್ವಾಮೀಜಿಯವರು ಆಶೀರ್ವಚನ ನೀಡಿದರು.



ಬಂಟ್ವಾಳ ತಹಶೀಲ್ದಾರ ನವೀನ್ ಬೆಂಜನಪದವು ಧಾರ್ಮಿಕ ಉಪನ್ಯಾಸ ನೀಡುತ್ತಾ “ಮಕ್ಕಳಿಗೆ ನಾವು ಓದಲು ಎಷ್ಟು ಒತ್ತು ಕೊಡುತ್ತೇವೆಯೋ ಅದೇ ರೀತಿ ಮಕ್ಕಳಲ್ಲಿ ಜ್ಞಾನ ಹೆಚ್ಚಿಸಲು ನಮ್ಮ ಸಂಸ್ಕಾರ, ಆಚಾರ-ವಿಚಾರ, ನಡೆ-ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಿ, ಹಿರಿಯರಿಗೆ ಗೌರವ ಹಾಗೂ ದೇವರಿಗೆ ಭಕ್ತಿಯನ್ನು ಹೇಗೆ ಸಲ್ಲಿಸಬೇಕು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಿದರೆ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಜ್ಞಾನವು ವೃದ್ಧಿಯಾಗಿತ್ತದೆ” ಎಂದರು.

ಬೆಂಜನಪದವು ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ವಿಜಯ್.ಕೆ, ಶ್ರೀ ಆದಿಶಕ್ತಿ ದೇವಸ್ಥಾನ ಬೆಳ್ಳೂರು ಕ್ಷೇತ್ರಾಧಿಕಾರಿ ಸಂದೀಪ್ ಸದಾಶಿವ ಬೆಳ್ಳೂರು, ಚಂದ್ರಹಾಸ ಪಲ್ಲಿಪಾಡಿ, ನೃತ್ಯಗುರು ದೀನರಾಜ್ ಕಳವಾರು, ಬಡಗಬೆಳ್ಳೂರು ಗ್ರಾಂ.ಪಂ ಅಧ್ಯಕ್ಷೆ ರೂಪ ನಾರಾಯಣ್, ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷ ತಿರುಮಲೇಶ್ ಕುಲಾಲ್, ಶ್ರೀ ಆದಿಶಕ್ತಿ ಮಾತೃ ಭಜನಾ ಮಂಡಳಿಯ ಅಧ್ಯಕ್ಷೆ ಸರಿತಾ ಮಾಧವ್, ಜನಾರ್ಧನ ಕೊಟ್ಟಾರಿ ತತ್ವಮಸಿ ಬೆಳ್ಳೂರು, ನಿಶಾಂತ್ ಬೆಳ್ಳೂರು, ನಾಗರಾಜ್ ಬೆಳ್ಳೂರು, ಹಾಗೂ ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯ ನಾರಾಯಣ ಮೂಲ್ಯ ಬೂನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಳಿಕ ಶ್ರೀ ಆದಿಶಕ್ತಿ ಕುಣಿತ ಭಜನಾ ತಂಡದ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಮೇಶ್ ಪೂಜಾರಿ, ಚಂದ್ರಹಾಸ್ ಪೂಜಾರಿ ಹಾಗೂ ವಸಂತ್ ಪೂಜಾರಿ ಇವರನ್ನು ಶಾಲು, ಫಲವಸ್ತು ನೀಡಿ ಗೌರವಿಸಲಾಯಿತು.


ಸಭಾಕಾರ್ಯಕ್ರಮದ ಬಳಿಕ ಊರಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಿನೇಶ್ ವರಕೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



