ಮುಂಬಯಿ: ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮೂಲಕ ದಿಗಂತದೆತ್ತರಕ್ಕೆ ಬೆಳೆಯುವುದೆಂದರೆ ಸಾಧ್ಯವೇ ಇದು ಸಾಧ್ಯವೆಂದು ಸಾಬೀತುಪಡಿಸಿದ ನಮ್ಮ ನಿಮ್ಮೊಂದಿಗೆ ಗುರುತಿಸಿಕೊಂಡ ಬಿಲ್ಲವ ಸಮಾಜದ *ಮಹಾನಾಯಕ ಜಯ ಸಿ ಸುವರ್ಣ ಮುಲ್ಕಿ. ಮುಂಬೈಯ ಉಪನಗರವಾಗಿರುವ ಗೋರೆಗಾಂವ್ ಪೂರ್ವದಲ್ಲಿ ಸಣ್ಣ ಉದ್ಯಮವನ್ನು ಪ್ರಾರಂಭಿಸಿ ಸಾಧನೆಯ ಮೆಟ್ಟಿಲನ್ನು ಏರುತ್ತಾ ಏರುತ್ತಾ ಮಹಾನಗರದಲ್ಲಿ ಜನನಾಯಕರಾಗಿ ಬೆಳೆದು ನಿಂತಿರುವ ಸಾಧನಾ ಶಿಖರ ಜಯ ಸುವರ್ಣ.
ಜಯ ಸುವರ್ಣರು ಸಾವಿರಾರು ಕನಸುಗಳನ್ನು ಹೊತ್ತು ಮಾಯಾನಗರಿಗೆ ಬಂದವರಲ್ಲ ಸಾಧನೆಯ ಮೂಲಕ ಸಾಧಕ ನಾಗಬೇಕುನ್ನುವ ಛಲ ಮತ್ತು ಪ್ರಾಮಾಣಿಕತೆಯ ದುಡಿಮೆಯಿಂದ ಸಾಧಿಸಿದವರು.ತನ್ನ ಜೀವನವನ್ನು ಸಮಾಜೋದ್ಧಾರಕ್ಕಾಗಿ ಮುಡಿಪಾಗಿಸಿ, ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ದೇಶ-ವಿದೇಶದ ಬಿಲ್ಲವ ಜನಾಂಗವನ್ನು ಒಗ್ಗೂಡಿಸಿ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿ ಮಹಾ ನಾಯಕರೆನಿಸಿಕೊಂಡ ಕರ್ಮಯೋಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪೂರ್ವ ಸಮಾಜಸೇವಕ ಜಯ ಸಿ ಸುವರ್ಣರು ಇಹಲೋಕ ತ್ಯಜಿಸಿ ಅ. 2ಕ್ಕೆ ಒಂದು ವರ್ಷ ಪೂರ್ತಿಯಾಗುತ್ತದೆ.
ಸಮಾಜವನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸಲು ಶ್ರಮವಹಿಸಿ ತನ್ನ ಸ್ವಾಭಿಮಾನದ ಬದುಕಿನೊಂದಿಗೆ ಎಲ್ಲರ ಹೃದಯದಲ್ಲಿ ಪ್ರೀತಿಯ ಜಯಣ್ಣ ರೆಂದೇ ಜನಾನುರಾಗಿಯಾಗಿದ್ದ ಅಪೂರ್ವ ಚೇತನ ಜಯ ಸಿ ಸುವರ್ಣರ ಸಾಧನೆ ಹಾಗೂ ಅನನ್ಯ ಸೇವೆಯನ್ನು ಗುರುತಿಸಿ ಮುಂಬಯಿ ಮಹಾನಗರ ಪಾಲಿಕೆಯವರು “ಗೋರೆಗಾಂವ್ ಪಿ ದಕ್ಷಿಣ ವಾರ್ಡ್ ನಲ್ಲಿರುವ ಶ್ರೀ ದತ್ತ ಮಂದಿರ ಚೌಕ್ ನಿಂದ ಗೋರೆಗಾಂವ್ ರೈಲ್ವೆ ನಿಲ್ದಾಣದ ತನಕದ ಮಾರ್ಗಕ್ಕೆ ‘ಜಯ ಸುವರ್ಣ’ ಎಂದು ನಾಮಕರಣ” ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ “ಮಹಾನ್ ನಾಯಕನ” ಹೆಸರು ಮರಾಠಿ ಮಣ್ಣಿನಲ್ಲಿ ಶಾಶ್ವತವಾಗಿ ಉಳಿಯಲಿದೆ. ಜಯ ಸುವರ್ಣರ ಅಮರ ವ್ಯಕ್ತಿತ್ವಕ್ಕೆ ಮಹಾರಾಷ್ಟ್ರದ ನೆಲದಲ್ಲಿ ಸಂದ ದೊಡ್ಡ ಗೌರವಾಗಿದೆ.
