ಬಜ್ಪೆ: ಗುರುಪುರ ಕೈಕಂಬ ಸಮೀಪದ ಮಟ್ಟಿ, ಕಾಜಿಲ, ಗುರುಪುರ ಸಮೀಪದ ಕಡ್ಲೆಗುಡ್ಡೆ ಎಂಬಲ್ಲಿ ಅಲ್ಲಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಮಳಲಿಯ ಮಟ್ಟಿ ಎಂಬಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಚಿರತೆ ಕಾಣಿಸುತ್ತಿದೆ ಎಂದು ತಿಳಿಸಿರುವ ಸ್ಥಳೀಯರು ಇಲ್ಲಿನ ಹಲವು ನಾಯಿಗಳನ್ನು ತಿಂದು ಹಾಕಿವೆ ಎಂದು ಹೇಳಿದ್ದಾರೆ.
ಗುರುಪುರ ಸಮೀಪದ ಕಡ್ಲೆಗುಡ್ಡೆ ಎಂಬ ದಟ್ಟ ಕಾನನದಲ್ಲಿ ಚಿರತೆ ತನ್ನ ಮರಿಗಳ ಜೊತೆ ಸಂಸಾರ ನಡೆಸುತ್ತಿದ್ದು ಹಲವಾರು ಸಂದರ್ಭಗಳಲ್ಲಿ ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಅಲ್ಲದೆ ಕಡ್ಲೆಗುಡ್ಡೆ ದಟ್ಟ ಕಾಡುಪ್ರದೇಶವಾಗಿದ್ದು ಶಾಲೆಗೆ ಹೋಗುವ ಪುಟಾಣಿ ಮಕ್ಕಳು ಇಲ್ಲಿ ಒಬ್ಬಂಟಿಗರಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಹೆತ್ತವರು ಮಕ್ಕಳ ಬಗ್ಗೆ ಆತಂಕವ್ಯಕ್ತಪಡಿಸುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
