ಹಿಂದೆ ಬಾಲಕಿಯೊಬ್ಬಳು ಮೈನೆರೆದಳೆಂದರೆ ಊರವರಿಗೆ ಒಂದು ದೊಡ್ಡ ಸುದ್ದಿ. ಮೊನ್ನೆಮೊನ್ನೆವರೆಗೂ ಲಂಗ ಎತ್ತಿ ಕುಣಿಯುತ್ತಿದ್ದ ಹುಡುಗಿಯನ್ನು ಜಾಗೃತೆ ಮಾಡಿ, ನೆಲದಲ್ಲಿಟ್ಟರೆ ಇರುವೆ ಕೊಂಡೊಯ್ಯುತ್ತದೆ, ಮೇಲಿಟ್ಟರೆ ಕಾಗೆ ಕೊಂಡುಹೋಗುತ್ತದೆ ಎಂಬ ರೀತಿಯಲ್ಲಿ ಜೋಪಾನ ಮಾಡುತ್ತಿದ್ದರು. ನಮ್ಮ ಊರಿನ ಯುವತಿಯೊಬ್ಬಳು ಮೈನೆರೆದಳೆಂದರೆ ಅದೊಂದು ಹೊಸ ಸುದ್ದಿ. ಬಾಲಕಿ ಯುವತಿಯಾದಳು ಎಂದು ಊರ ಹೆಂಗಸರೆಲ್ಲಾ ಹಾಗೆ ಹೀಗೆ ಮಾತಾಡುವುದುಂಟು. ಮೊನ್ನೆ ಮೊನ್ನೆ ತನಕ ಹಾಡಿ ಕುಣಿಯುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಮನೆರೆದಂತೆ ಮನೆಯವರ ವರ್ತನೆಯೇ ಬದಲಾಗುತ್ತದೆ. ತುಂಡು ಧಾವಣಿ, ಲಂಗ ಹಕುತ್ತಿದ್ದ ಹುಡುಗಿಯನ್ನು ಮನೆಯಲ್ಲೇ ಇರು, ಹೊರಗೆ ಹೋಗಬೇಡಮ್ಮ, ಹುಡುಗರೊಂದಿಗೆ ಮಾತಾಡ್ಬೇಡ ಹಾಗೆ ಹೀಗೆ ಎಂದೆಲ್ಲಾ ಜಾಗೃತೆ ಹೇಳುತ್ತಿದ್ದರು.
ಹುಡುಗಿಯೊಬ್ಬಳು ಋತುಮತಿಯಾದಂತೆ ಆಕೆ ಕೂಡ ಗಂಭೀರವಾಗಿಬಿಡುತ್ತಾಳೆ. ತನ್ನ ದೇಹದಲ್ಲಿ ಏನೋ ಆಗಿದೆ ಎಂದು ಗೊತ್ತಿದ್ದರೂ ಮನೆಯವರೆಲ್ಲಾ ಸೇರಿ ಸಂಭ್ರಮಿಸುವಾಗ ಏನೋ ಒಂತರ ನಾಚಿಕೆ, ಪುಳಕ ಹುಟ್ಟಿಕೊಂಡುಬಿಡುತ್ತದೆ. ಕೊಂಚ ನಾಚಿಕೆ, ಕೊಂಚ ಭಯ,ಕೊಂಚ ಅಳು…
ಬಾಲಕಿಯೊಬ್ಬಳು ಪೆದ್ದುಪೆದಾಗಿ ಭಯದಿಂದ ತಾನು ಋತುಮತಿಯಾದ ವಿಷಯವನ್ನು ತನ್ನ ಅಮ್ಮನಲ್ಲಿ ಹೇಳಿದಾಗ, ಆಗಿನ ಕಾಲದ ಅಮ್ಮನ ವರ್ತನೆಯೇ ಬೇರೆಯಾಗಿ ಬಿಡುತ್ತಿತ್ತು. ಆಕೆಗೆ ತುಂಡು ಉಡುಗೆಯನ್ನು ಕೊಟ್ಟು ಇದನ್ನು ತೊಟ್ಟುಕೋ, ನೀರಲ್ಲಿ ಸ್ನಾನ ಮಾಡು. ದೇವರ ಕೋಣೆಗೆ ಹೋಗಬೇಡ, ಯಾರ್ಯಾರನ್ನೂ ಮುಟ್ಟಬೇಡ. ಅಡಿಗೆಕೋಣೆಗೆ ಹೋಗ್ಬೇಡ. ಮೈಲಿಗೆ ಎಂದೆಲ್ಲಾ ಹೆದರಿಸಿದಾಗ ಯುವತಿ ಭಯಬೀಳುತ್ತಿದ್ದಳು. ಆಕೆ ಮೈನೆರೆದ ವಿಷಯ ಇಡೀ ಊರಿಗೆ ಸುದ್ದಿಯಾಗುತ್ತಿತ್ತು.

ನಾನಾಗ ಚಿಕ್ಕ ಹುಡುಗ. ನಮ್ಮ ನೆರೆಮನೆಯ ಹುಡುಗಿಯೊಬ್ಬಳು ಮೈನೆರೆದ ಸುದ್ದಿ ನನ್ನ ಕಿವಿಗೆ ಬಿತ್ತು. ಆಗ ಅದು ಏನೆಂದೇ ನನಗೆ ಗೊತ್ತಿರಲಿಲ್ಲ. ಅಮ್ಮನಲ್ಲಿ ಕೇಳಿದರೆ ಅದೆಲ್ಲಾ ನಿನಗ್ಯಾಕೆ ಎಂಬ ಉತ್ತರ. ಕೊನೆಗೆ ನಾನು ನೆರೆಮನೆಗೆ ಓಡಿದೆ. ಅಲ್ಲಿ ನನ್ನ ಬಾಲ್ಯದ ಗೆಳತಿಯನ್ನು ತೆಂಗಿನ ಮರದ ಬುಡದಲ್ಲಿ ಸ್ನಾನ ಮಾಡಿಸುತ್ತಿದ್ದರು. ನಾನು ಹೋಗಿ ಆಕೆಯ ಅಮ್ಮನಲ್ಲಿ ಕೇಳಿದೆ.
`ಆಕೆಗೆ ಏನಾಯ್ತು?’
`ನಮ್ಮ ಹುಡುಗಿ ದೊಡ್ಡವಳಾಗಿದ್ದಾಳೆ..’
`ಅರೆ ಹಾಗೆ ಇದ್ದಾಳಲ್ಲ’
ನಿನಗದು ಗೊತ್ತಾಗುವುದಿಲ್ಲ
(ನಾನು ಮೌನವಾಗಿದ್ದೆ)
`ಆಕೆಗೆ ಕಾಗೆ ಬಂದು ಕುಕ್ಕಿ ಬಿಟ್ಟಿದೆ’
`ಎಲ್ಲಿ ಗಾಯನೇ ಕಾಣ್ತಿಲ್ಲ?’
ಇಷ್ಟಾಗುವಾಗ ತೆಂಗಿನ ಮರದ ಬುಡುದಲ್ಲಿ ಅರಶಿನ ನೀರಲ್ಲಿ ಸ್ನಾನ ಮಾಡಿಸುತ್ತಿದ್ದ ಯುವತಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು. ಆಕೆ ಯಾಕೆ ಅತ್ತಿದ್ದಾಳೆಂದು ನನಗೆ ಗೊತ್ತಾಗಲಿಲ್ಲ. ಆಕೆ ಅತ್ತದ್ದನ್ನು ನೋಡಿ ನನ್ನ ಕಣ್ಣ ಅಂಚಲ್ಲಿ ನೀರು ಜಿನುಗಿದ್ದು ಮಾತ್ರ ಸುಳ್ಳಲ್ಲ.
ತೆಂಗಿನ ಬುಡುದಲ್ಲಿ ಅರಶಿನ ಸ್ನಾನ:
ಯುವತಿ ಮೈನೆರೆದಂತೆ ಆಕೆಯನ್ನು ಫಲ ಹೋದ ತೆಂಗಿನ ಮರದ ಬುಡದಲ್ಲಿ ಕುಳ್ಳಿರಿ ಸ್ನಾನ ಮಾಡುವ ಪರ್ವ ಇರುತ್ತಿತ್ತು. ಯುತಿ ನಾಚುತ್ತಾ ನಾಚುತ್ತಾ ತೆಂಗಿನ ಮರದ ಬುಡಕ್ಕೆ ಬರುತ್ತಿದ್ದಳು. ಆಕೆಯ ಅಮ್ಮ ಅರಶಿನ ನೀರನ್ನು ಆಕೆಯ ತಲೆಗೆ ಸುರಿಯುತ್ತಿದ್ದರು. ಈ ವೇಳೆ ಯುವತಿ ನಾಚುತ್ತಾ ನಾಚುತ್ತಾ ಒಮ್ಮೆ ಬೇಗ ಮುಗಿಸಮ್ಮಾ ಎನ್ನುವ ರೀತಿಯಲ್ಲಿ ಅವಸರ ಪಡಿಸುತ್ತಿದ್ದಳು. ಆಕೆಯನ್ನು ಸ್ನಾನಮಾಡಿಸುವುದನ್ನು ನೋಡುವ ನೆರೆಮನೆಯ ಬಜಾರಿ ಹೆಂಗಸರು ನೋಡಿಕೊಂಡು ಅದನ್ನು ಇಡೀ ಊರಿಗೆ ಸುದ್ದಿಮುಟ್ಟಿಸುತ್ತಿದ್ದರು.
ಮರುದಿನ ಆಕೆಗೆ ಅವಲಕ್ಕಿ, ಓಲೆಬೆಲ್ಲ ತಂದು ನೀಡುತ್ತಾರೆ. ಹುಡುಗಿ ನಾಚುತ್ತಾ ನಾಚುತ್ತಾ ತೆಗೆದುಕೊಳ್ಳುವುದು ಸಮಾನ್ಯ
ಅವಲಕ್ಕಿ ಬೆಲ್ಲ:
ಒಬ್ಬಳು ಹುಡುಗಿ ಮನೆರೆಯುತ್ತಾಳೆಂದರೆ ಆಕೆಗೆ ಓಲೆಗೆ ಓಲೆ ಬೆಲ್ಲ ಹಾಗೂ ಅವಲಕ್ಕಿ ತಂದು ಕೊಡುತ್ತಾರೆ. ಕೆಲವು ಹೆಂಗಸರು `ನಿಕ್ಲೆನ ಪೊಣ್ಣು ಬಜಿಲಾತಳಾ?’ ಎಂದು ಕೇಳುತ್ತಿದ್ದರು. ಊರವರೆಲ್ಲಾ ಸೇರಿಕೊಂಡು ಆಕೆಗೆ ಕೇಜಿಗಟ್ಟಲೆ ಅವಲಕ್ಕಿ ಹಾಗೂ ಒಂದು ಕಟ್ಟು ಬೆಲ್ಲ ತಂದುಕೊಡುತ್ತಿದ್ದರು. ಅವಲಕ್ಕಿ ಹಾಗೂ ಓಲೆಬೆಲ್ಲದಲ್ಲಿ ಕಬ್ಬಿಣದಂಶ ಜಾಸ್ತಿ ಇರುವುದರಿಂದ ಮೈನೆರೆದ ಹೆಣ್ಣಿಗೆ ಅದನ್ನು ಕೊಟ್ಟರೆ ಉತ್ತಮ ಎಂದು ಊರವರಿಗೆ ಗೊತ್ತಿತ್ತು. ಬೆಲ್ಲ, ಅವಲಕ್ಕಿತಿಂದ ಹುಡುಗಿಗೆ ನಾರ್ಮಲ್ ಡೆಲಿವರಿ ಆಗುತ್ತಿತ್ತು.
ಪಡ್ಡೆಗಳಿಗೆ ದೊಡ್ಡ ವಿಷ್ಯ:
ಒಂದು ಹುಡುಗಿ ಮೈನೆರೆದಳೆಂದರೆ ಅದು ಪಡ್ಡೆಗಳಿಗೆ ಒಂದು ದೊಡ್ಡ ವಿಷಯವಾಗುತ್ತಿತ್ತು. ಊರಲ್ಲೆಲ್ಲಾ ಅದನ್ನೇ ಸುದ್ದಿ ಮಾಡುತ್ತಿದ್ದರು. ಮೆಲ್ಲನೆ ಮಾತಾಡುತ್ತಾ ಅದರ ವಿಷಯವನ್ನು ಮಾತಾಡುತ್ತಾ ಥ್ರಿಲ್ ಅನುಭವಿಸುತ್ತಿದ್ದರು. ಇನ್ನು ಮನೆಯವರಿಗಂತೂ ಆಕೆ ಮದುವೆಯಾದ ಪ್ರಾಯದವಳಾದಲೆಂದು ಚಿಂತೆ ಬೇರೆ.
ಕರ ಪತ್ತಾವುನಿ:
ಹಿಂದಿನ ಕಾಲದಲ್ಲಿ ಬಾಲಕಿ ಮೈನೆರೆದ ಬಳಿಕ ಆಕೆಗೆ `ಕರಪತ್ತಾವುನಿ’ ಎಂದು ಮದುವೆಯಂಥದ್ದೇ ಸಂಪ್ರದಾಯ ಮಾಡುತ್ತಿದ್ದರು. ತೆಂಗಿನ ಸಿಪ್ಪೆಗಳನ್ನು ಉಪಯೋಗಿಸಿ ಆಕೆಯನ್ನು ಅದರಲ್ಲಿ ಕುಳ್ಳಿರಿಸಿ ಅರಶಿನ ಕೊಂಬಿನ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಊರವರನ್ನು ಕರೆಸಿ ಊಟ ಹಾಕಿಸುತ್ತಿದ್ದರು. ಊರವರು ದಕ್ಷಿಣೆ ನೀಡುತ್ತಿದ್ದರು. ಆದರೆ ಇದೀಗ ಈ ಸಂಪ್ರದಾಯ ತುಳುನಾಡಲ್ಲಿ ನಿಂತುಹೋಗಿದೆ.
ತಮಿಳುನಾಡಲ್ಲಿ ಇನ್ನೂ ಈ ಪದ್ದತಿ ನೀವಂತವಿದೆ. ನಾನು ತಮಿಳುನಾಡಲ್ಲಿದ್ದ ಸಂದರ್ಭ ಬಹುಮಹಡಿ ಕಟ್ಟಡವೊಂದರ ಮೇಲೆ ನಮ್ಮ ಫ್ಲ್ಯಾಟ್. ಅದರ ಮೇಲೆ ಕೂತರೆ ಇಡೀ ಊರಿನವರ ದರ್ಶನವಾಗುತ್ತದೆ. ಆಗ ಕೆಲವು ಮನೆಯಲ್ಲಿ ಹುಡುಗಿಯನ್ನು ಕರೆದುಕೊಂಡು ಬಂದು ತೆಂಗಿನ ಬುಡದಲ್ಲಿ ಸ್ನಾನ ಮಾಡಿಸುತ್ತಿದ್ದರು. ನಮ್ಮ ಕಚೇರಿಹುಡುಗ ಸುಬ್ಬು ಹೇಳಿದ ಮೇಲೆಯೇ ಅಸಲಿ ವಿಷಯ ಗೊತ್ತಾಗಿದ್ದು.
-ಗಿರಿ




