ಗುರುಪುರ : ಮಂಗಳೂರು ತಾಲೂಕು ಪಂಚಾಯತ್‍ನಲ್ಲಿ ಕರ್ತವ್ಯ ಮುಗಿಸಿ ಬಸ್ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ಸಿಬ್ಬಂದಿ ರೇವತಿಯವರ ಚಿಕಿತ್ಸೆಗೆ ನೆರವಾಗುವಂತೆ ಮಂಗಳೂರು ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ), ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಮತ್ತು ಪಂಚಾಯತ್ ಸಿಬ್ಬಂದಿ ಒಗ್ಗೂಡಿ ಸಂಗ್ರಹಿಸಲಾದ 1,13,200 ರೂ ನಗದು ಮೊತ್ತವನ್ನು ಮಂಗಳೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮೂಲಕ ಹಸ್ತಾಂತರಿದರು.gur-june-9-pdo's

“ಪಂಚಾಯತ್ ನೌಕರರಿಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸುವ ವೈದ್ಯಕೀಯ ಇನ್ಸುರೆನ್ಸ್ ಸೌಲಭ್ಯ ಹಾಗೂ ಇತರ ಭತ್ಯೆಗೆ ಅವಕಾಶ ಇರುವುದಿಲ್ಲ. ಕಾರಣ, ಪಂಚಾಯತ್‍ರಾಜ್ ನೌಕರರಾದ ನಾವೆಲ್ಲ ಸಹಾಯ ಮಾಡುವಂತಾಗಿದೆ. ನಾವೆಲ್ಲ ಒಟ್ಟು 1,08,200 ರೂ ಸಂಗ್ರಹಿಸಿದ್ದು, ಈ ಮೊತ್ತ ಹಸ್ತಾಂತರ ವೇಳೆ ತಾಪಂ ಸಿಇಒ ಸದಾನಂದ ಸಪಲಿಗರು 5,000 ರೂ ಒದಗಿಸಿದರು. ಸದ್ಯ ಕೋವಿಡ್-19 ವೈರಾಣು ಹಾವಳಿ ಹರಡದಂತೆ ಆಸ್ಪತ್ರೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವುದರಿಂದ ರೇವತಿಯವರಿಗೆ ನೇರವಾಗಿ ಈ ಮೊತ್ತ(ಒಟ್ಟು 1,13,200 ರೂ) ಹಸ್ತಾಂತರಿಸಲು ಸಾಧ್ಯವಾಗಿಲ್ಲ ಎಂದು ಬಜ್ಪೆ ಪಿಡಿಒ ಸಾಯೀಶ್ ಚೌಟ ಮತ್ತು ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ತಿಳಿಸಿದರು.

ತಾಪಂ ಸಿಇಒ ಸದಾನಂದರ ಮೂಲಕ ಸಹಾಯ ಮೊತ್ತ ಹಸ್ತಾಂತರದ ವೇಳೆ ಬಜ್ಪೆ ಪಿಡಿಒ ಸಾಯೀಶ್ ಚೌಟ, ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್, ಮೆನ್ನಬೆಟ್ಟು ಗ್ರಾಪಂ ಪಿಡಿಒ ಡಾ. ರಮ್ಯಾ, ಜೋಕಟ್ಟೆ ಗ್ರಾಪಂ ಪಿಡಿಒ ಅಬ್ದುಲ್ ಅಸಫ್, ತಾಪಂ ವ್ಯವಸ್ಥಾಪಕಿ ಕಲಾವತಿ, ಗುರುಪುರ ಗ್ರಾಪಂ ಸಿಬ್ಬಂದಿಯಾದ ಇರ್ಶಾದ್, ಸುದರ್ಶನ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *