ಕೈಕಂಬ:ಮಂಗಳೂರು(ಕುಲಶೇಖರ)-ಮೂಡಬಿದ್ರಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆ ಜೂ. 12ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಅಂದಾಜು 39.42 ಕೋಟಿ ರೂ ವೆಚ್ಚದ ಈ ಸೇತುವೆ ನಿರ್ಮಾಣ ಕಾರ್ಯ 2019ರ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷದ ಗಡುವು ನೀಡಲಾಗಿದ್ದರೂ, ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯು(ಕಾವೂರು) ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿದೆ. ಅಲ್ಪಸ್ವಲ್ಪ ಕಾಮಗಾರಿ ಬಾಕಿ ಉಳಿದಿದ್ದ ಕಾರಣ ಕಳೆದ ವಾರ ನಡೆಯಬೇಕಿದ್ದ ಉದ್ಘಾಟನಾ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಏಳು ಅಂಗಣಗಳ ಸೇತುವೆಯ ಎರಡೂ ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡು ಫೂಟ್ಪಾತ್ ಹಾಗೂ ಎರಡು ಕೊನೆಗಳಲ್ಲಿ ತಲಾ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣಗೊಳಿಸಲಾಗಿದೆ.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲರಿಂದ ಸೇತುವೆಗೆ ಶಿಲಾನ್ಯಾಸ ನಡೆದಿದ್ದು, ಸಂಸದರೇ ಉದ್ಘಾಟನೆ ನೆರವೇರಿಸಲಿದ್ದಾರೆ. ಜೊತೆಯಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಸ್ಥಳೀಯ ರಾಜಕೀಯ ಮುಖಂಡರು, ಅಧಿಕಾರಿ ವರ್ಗ ಉಪಸ್ಥಿತರಿರುವರು.
“ಸಂಸದರ(ನಳಿನ್ ಕುಮಾರ್) ಅವರ ನಿಕಟ ಮುತುವರ್ಜಿಯಿಂದ ಗುರುಪುರ ಸೇತುವೆ ಕಾಮಗಾರಿ ಅತ್ಯಂತ ಕ್ಷಿಪ್ತ ಹಾಗೂ ತುರ್ತಾಗಿ ನಡೆದಿದೆ. ಹಳೆ ಸೇತುವೆಯಲ್ಲಿ ಘನ ವಾಹನ ಹೊರತುಪಡಿಸಿ ಉಳಿದ ವಾಹನಗಳು(ತ್ರಿಚಕ್ರ, ದ್ವಿಚಕ್ರ) ಸಂಚರಿಸುವ ವಿಷಯದಲ್ಲಿ ಶೀಘ್ರ ಸಮಾಲೋಚಿಸಲಾಗುವುದು. ಸೇತುವೆ ನಿರ್ಮಾಣಕ್ಕೆ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದೆ. ಇದು ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ವಿಶಿಷ್ಠ ಧ್ಯೋತಕವಾಗಿದೆ. ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ” ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.
“ಸರ್ಕಾರ ನೀಡಿದ ಅಧಿಗೆ ಮುಂಚಿತವಾಗಿ ಸೇತುವೆ ನಿರ್ಮಿಸಿ ಕೊಟ್ಟಿದ್ದೇವೆ ಎಂಬ ತೃಪ್ತಿ ನಮಗಿದೆ. ಕಂಪೆನಿಯ ಪ್ರತಿಯೊಬ್ಬರ ಶ್ರಮ ದಾಖಲಾಗುತ್ತದೆ. ಈ ಕಾಮಗಾರಿ ನಮ್ಮ ಕಂಪೆನಿಯ ಭವಿಷ್ಯದ ಕಾಮಗಾರಿಗಳಿಗೆ ಹೆಗ್ಗುರುತಾಗಿರುತ್ತದೆ. ಹೊಸ ಸೇತುವೆ ಲೋಕಾರ್ಪಣೆ ಮೂಲಕ ಈ ಭಾಗದ ಸಾರಿಗೆ ಸಂಚಾರ ಸುಗಮವಾಗಲಿದೆ” ಎಂದು ಮೊಗರೋಡಿ ಕನ್‍ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ ಹೇಳಿದರು.
