ಬಂಟ್ವಾಳ, : ರಾಷ್ಟ್ರೀಯ ಹೆದ್ದಾರಿ ೭೫ರ ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯಿಂದ ಒಂದೇ ಕುಟುಂಬದ ಮೂವರು ನಾಯಿಯೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಇವರ ಪೈಕಿ ತಾಯಿಯ ಮೃತ ದೇಹವು ರಾತ್ರಿಯೇ ಪತ್ತೆಯಾಗಿದ್ದು, ಮಕ್ಕಳಿಬ್ಬರ ಮೃತದೇಹವನ್ನು ರವಿವಾರ ಶೋಧಾ ಕಾರ್ಯ ನಡೆಸಲಾಗಿದ್ದು ಯುವತಿಯ ಶವ ಕೋಣಾಜೆ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಮೂಲತಃ ವೀರಾಜಪೇಟೆ ತಾಲೂಕು ಕಡಂಗ ನಿವಾಸಿ, ಸದ್ಯ ಮೈಸೂರಿನ ಪಿ.ಎಸ್.ನಗರದ ಕವಿತಾ ಮಂದಣ್ಣ (೫೫), ಮಗ ಕೌಶಿಕ್ ಮಂದಣ್ಣ (೨೦), ಮಗಳು ಕಲ್ಪಿತಾ ಮಂದಣ್ಣ (೨೦) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ಕೊಡಗಿನ ವೀರಾಜಪೇಟೆಯ ಬಲ್ಲಚಂಡ ಕುಟುಂಬಸ್ಥರು. ಇವರ ತಂದೆ ಕಿಶನ್ ಮಂದಣ್ಣ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು. ಇದರಿಂದ ಆಘಾತಗೊಂಡ ಕುಟುಂಬ ಆತ್ಮಹತ್ಯೆಗೆ ತೀರ್ಮಾನಿಸಿ ಬಂದು ಬಂಟ್ವಾಳದ ನೇತ್ರಾವತಿ ಸೇತುವೆಯಿಂದ ದುಮುಕಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆ ವಿವರ:
ಮೃತ ಕವಿತಾ ಮಂದಣ್ಣ ಅವರ ಪತಿ ಕಿಶನ್ ಮಂದಣ್ಣ ಎಂಬವರು ಕೃಷಿಕರಾಗಿದ್ದು, ಇವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ತೀವ್ರವಾದ ಹುಡುಕಾಟದ ಬಳಿಕ ಶನಿವಾರ ಮಧ್ಯಾಹ್ನದ ವೇಳೆ ಇವರ ಮೃತದೇಹ ಪತ್ತೆಯಾಗಿತ್ತು. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕೊಂಡೊಯ್ಯೊದ ವೇಳೆ ಕಿಶನ್ ಅವರ ಸಾವಿನ ದುಃಖದಿಂದ ಈ ಕುಟುಂಬವು ಮೊಬೈಲ್ ಸ್ವಿಚ್ಆಫ್ ಮಾಡಿ ಪತ್ರವನ್ನು ಬರೆದಿಟ್ಟು ಮಂಗಳೂರು ಕಡೆಗೆ ಆಗಮಿಸಿತ್ತು ಎನ್ನಲಾಗಿದೆ.

ರಾತ್ರಿ ಸುಮಾರು ೧೦.೩೦ರ ವೇಳೆ ಈ ಕುಟುಂಬ ಬಂಟ್ವಾಳದ ಪಾಣೆಮಂಗಳೂರಿಗೆ ಬಂದು ನೇತ್ರಾವತಿ ನದಿಯ ಸುಮಾರು ೫೦೦ ಮೀ. ದೂರದಲ್ಲಿ ಕಾರು ನಿಲ್ಲಿದೆ. ಬಳಿಕ ಅಲ್ಲಿಂದ ಕವಿತಾ ಮಂದಣ್ಣ ನಾಯಿಯನ್ನು ಹಿಡಿದುಕೊಂಡು ಮಕ್ಕಳ ಜೊತೆ ನೇತ್ರಾವತಿ ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿದ್ದಾರೆ. ಈ ವೇಳೆ ಕವಿತಾ ಅವರು ತನ್ನ ಪ್ರೀತಿಯ ನಾಯಿಯನ್ನು ಹಿಡಿದುಕೊಂಡು ಜೊತೆಯಾಗಿ ಹಾರಿದ್ದರು. ಇದನ್ನು ಕಂಡ ಸ್ಥಳೀಯ ರಿಕ್ಷಾ ಚಾಲಕರೋರ್ವರು ಸ್ಥಳೀಯ ಈಜುಗಾರರಲ್ಲಿ ತಿಳಿಸಿದ್ದಾರೆ. ನಾಯಿ ಜೊತೆಯಲ್ಲಿ ಹಾರಿದ ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಮುಳುಗೇಳುತ್ತಿದ್ದ ಸಂದರ್ಭದಲ್ಲಿ ನೋಡಿದ ಸ್ಥಳೀಯ ಮುಳುಗುತಜ್ಞರು ಕಾರ್ಯಪ್ರವೃತ್ತರಾಗಿದ್ದು, ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆ ಜೊತೆಗೆ ನಾಯಿಯನ್ನೂ ರಕ್ಷಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ತಕ್ಷಣ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿತ್ತು. ಆದರೆ, ರಾತ್ರಿ ಸುಮಾರು ೧೧.೪೫ರ ವೇಳೆಗೆ ಕವಿತಾ ಕೊನೆಯುಸಿರೆಳೆದಿರುವುದಾಗಿ ಆಸ್ಪತ್ರೆಯ ಮೂಲಗಳು ದೃಢಪಡಿಸಿದೆ.
ಪುತ್ರಿ ಮೃತದೇಹ ಇನೋಳಿಯ ಪತ್ತೆ:
ಪುತ್ರಿ ಕಲ್ಪಿತಾ ಮಂದಣ್ಣ ಅವರ ಮೃತದೇಹವು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಇನೋಳಿಯ ಕೊರಿಯ ನದಿ ಪಾತ್ರದಲ್ಲಿ ಭಾನುವಾರ ಮಧ್ಯಾಹ್ನ ೧.೩೦ಗಂಟೆಯ ಸುಮಾರಿಗೆ ಪತ್ತೆಯಾಗಿದೆ ಆದರೆ ಈ ಮೃತದೇಹವನ್ನು ಅವರ ವಾರೀಸುದಾರರಿಂದ ಗುರುತು ಹಚ್ಚುವ ಕಾರ್ಯ ಆಗಬೇಕಷ್ಟೆ ಎಂದು ತಿಳಿದು ಬಂದಿದೆ. ಪುತ್ರ ಕೌಶಿಕ್ ಮಂದಣ್ಣ ಅವರ ಮೃತದೇಹವು ರಾತ್ರಿ ೭ಗಂಟೆಯವರೆಗೂ ಪತ್ತೆಯಾಗಿಲ್ಲ. ರಾತ್ರಿಯವರೆಗೂ ಶೋಧಾ ಕಾರ್ಯಮುಂದುವರಿದಿದೆ.
೨ ತಂಡಗಳ ಕಾರ್ಯಾಚರಣೆ:
ಪಾಣೆಮಂಗಳೂರು ಹಳೇ ಸೇತುವೆಯಿಂದ ತುಂಬೆ ವೆಂಟೆಡ್ ಡ್ಯಾಂವರೆಗೆ ಶನಿವಾರ ರಾತ್ರಿ ಮತ್ತು ರವಿವಾರ ಇಡೀ ದಿನ ಕಾರ್ಯಾಚರಣೆ ನಡೆಯಿತು. ಬಂಟ್ವಾಳ, ಪಾಂಡೇಶ್ವರದ ಎರಡು ದೋಣಿಗಳಲ್ಲಿ ಅಗ್ನಿಶಾಮಕದಳ ೧೨ ಮಂದಿಯ ತಂಡ, ಎನ್ಡಿಆರ್ಎಫ್ನ ೧೫ ಮಂದಿಯ ತಂಡ, ಸ್ಥಳೀಯ ಈಜುಪಟುಗಳಾದ ಮುಹಮ್ಮದ್, ಮೋನು, ಸತ್ತಾರ್ ಗೂಡಿನಬಳಿ, ಇಬ್ರಾಹಿಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಹಾಯಕ ಅಗ್ನಿಶಾಮಕದಳ ಅಧಿಕಾರಿ ರಾಜೀವ್ ಮಾಹಿತಿ ನೀಡಿದರು. ಈ ಸಂದರ್ಭ ಸಿಐ ನಾಗರಾಜ್, ಎಸ್ಸೈ ಚಂದ್ರಶೇಖರ್, ಕಂದಾಯ ಇಲಾಖೆಯಿಂದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ಬಿ.ಮೂಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶಿವಪ್ರಸಾದ್ ಜೊತೆಗಿದ್ದರು.
ಕವಿತಾ ಮಂದಣ್ಣ ಅವರು ನಾಯಿಯ ಜೊತೆಯಾಗಿ ನದಿಗೆ ಹಾರಿದ್ದಾರೆ. ಈ ವೇಳೆ ನಾಯಿ ನದಿಯಲ್ಲಿ ಈಜಿಕೊಂಡು ಯಜಮಾನಿಯಿದ್ದ ಕಡೆ ಬಂದಿದೆ. ನೇತ್ರಾವತಿಗೆ ಕುಟುಂಬ ನಾಯಿಯೊಂದಿಗೆ ಹಾರಿದಾಗ ಸ್ಥಳೀಯರು ಗಮನಿಸಿ ಕಾರ್ಯಾಚರಣೆಗಿಳಿದಿದ್ದಾರೆ. ನುರಿತ ಮುಳುಗುತಜ್ಞ ಮುಹಮ್ಮದ್ ಅವರಿಗೆ ನಾಯಿಯ ಕಣ್ಣು ಹೊಳೆಯುತ್ತಿರುವುದು ಕಂಡಿದೆ. ಇದರಿಂದಾಗಿ ನಾಯಿಯನ್ನು ಎಳೆದು ದಡಕ್ಕೆ ತರುವ ಸಂದರ್ಭ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಕ್ಷಣೆಯ ಬಳಿಕ ನಾಯಿಯನ್ನು ಗೂಡಿನಬಳಿಯ ಶಾಲೆಯೊಂದರಲ್ಲಿ ರಾತ್ರಿ ಕಟ್ಟಿಹಾಕಿ ಬಳಿಕ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಆದರೆ, ನಾಯಿಯು ಅಲ್ಲಿಂದ ಓಡಿಹೋಗಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಜಾಗೃತ ಕ್ರಮವಾಗಿ ಪೊಲೀಸರು ನಾಯಿಯನ್ನು ಪತ್ತೆಹಚ್ಚುವಲ್ಲಿ ಸಫಲರಾದರು. ನಾಯಿಯನ್ನು ಎಸ್ಸೈ ಚಂದ್ರಶೇಖರ್ ನೇತೃತ್ವದಲ್ಲಿ ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಯಿತು.
“ಇದು ಕೂರ್ಗ್ನ ಬುದ್ಧಿವಂತ ನಾಯಿ. ನೋಡಲು ಕೂಡಾ ಚೆಂದ. ರಕ್ಷಣೆ ಮಾಡಿದ ನಾಯಿಯನ್ನು ಇದೀಗ ಪೊಲೀಸರು ಆರೈಕೆ ಮಾಡಲು ಇಲ್ಲಿಗೆ ಒಪ್ಪಿಸಿದ್ದಾರೆ. ನಾಯಿಯನ್ನು ಸ್ನಾನ ಮಾಡಿಸಿ ಪ್ರಾಥಮಿಕ ಶುಶ್ರೂಷೆ ಮಾಡಲಾಗಿದೆ ಎಂದು ಮತ್ಸ್ಯ ಎನಿಮಲ್ ಕೇರ್ನ ಪುಪ್ಪರಾಜ್ ಪತ್ರಿಕೆಗೆ ತಿಳಿಸಿದ್ದಾರೆ.
ಯಜಮಾನ ಸಹಿತ ಇಡೀ ಕುಟುಂಬದ ಅಗಲುವಿಕೆಗೆ ಮೂಕಪ್ರೇಕ್ಷಕನಾಗಿ, ಸಾಕ್ಷಿಯಾಗಿ ಬದುಕುಳಿದದ್ದು ನಾಯಿಯನ್ನು ನೋಡಲು ಕುತೂಹಲಿಗರ ದಂಡು ಬಿ.ಸಿ.ರೋಡಿನ ಮತ್ಸ್ಯ ಅನಿಮಲ್ ಕೇರ್ಗೆ ಬರತೊಡಗಿದವು.
