ಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆ. ಅದು ಜೂನ್ ತಿಂಗಳು, ಕೃಷಿ ಕಾರ್ಯದಲ್ಲಿ ರೈತರು ತಲ್ಲೀಣರಾಗಿದ್ದರು. ಆಗ ಊರಿಗೆ ಊರೇ ನುಂಗವಂತೆ ಭಯಾನಕ ಪರಿಸ್ಥಿತಿ ಎದುರಾಯಿತು. ಗದ್ದೆಯಲ್ಲಿ ಬಿತ್ತಿದ ಬೆಳೆಗೆ ಮಾರಿ ಒದಗಿದ ಕ್ಷಣವದು. ಜನರಿಗೆ ರೋಗ ಬಡಿದ ಕ್ಷಣವದು.
ಅಷ್ಟಕ್ಕೂ ಏನಾಯ್ತು?
ಗದ್ದೆಯಲ್ಲಿ ಪೈರು ನಳನಳಿಸಿ ನಿಂತಿತ್ತು. ಇನ್ನೇನು ಪೈರು ಬೆಳೆದು ಕಟಾವಿಗೆ ಸಿದ್ದವಾಗುತ್ತಿದ್ದಂತೆ ಹಸಿರು ಬಣ್ಣದ ಹುಳಗಳ ದಾಳಿ ನಡೆಯಿತು. ಊರವರು ಹೇಳುವಂತೆ ಸುಮಾರು ಎರಡಿಂಚು ಉದ್ದದ ಹಸಿರು ಬಣದ ಹುಳುಗಳು ಒಂದೇ ಸಮನೆ ಪೈರುಗಳನ್ನು ತಿನ್ನಲಾರಂಭಿಸಿತು. ಊರವರು ನೋಡುನೋಡುತ್ತಿದ್ದಂತೆ ಗದ್ದೆಯಲ್ಲಿ ಬೆಳೆದಿದ್ದ ಪೈರುಗಳನ್ನು ರಾಕ್ಷಸ ಹುಳುಗಳು ಸಂಹಾರ ಮಾಡಲಾರಂಭಿಸಿತು. ಹಳುಗಳ ಭಯಾನಕ ನರ್ತನ ಹೇಗಿತ್ತೆಂದರೆಎಲ್ಲಿ ನೋಡಿದರಲ್ಲಿ ಹುಳು, ಗದ್ದೆಯ ಹುಣಿಯಲ್ಲೂ ಕಾಣಿಸಿಕೊಂಡ ಹುಳುಗಳ ದಾಳಿಯಿಂದ ಜನರು ಕಂಗಾಲಾದರು.
ಅದರೊಂದಿಗೆ ಭೇದಿ;
ಹುಳುಗಳ ರುದ್ರ ನರ್ತನ ಮಾತ್ರವಲ್ಲ ಊರವರಿಗೆ ಭಯಾನಕ ಬೇದಿ ಕಾಣಲಾರಂಭಿಸಿತು. ಸಾಂಕ್ರಾಮಿಕವಾಗಿ ಎಲ್ಲರಲ್ಲೂ ಬೇಧಿ ಕಾಣಲಾರಂಭಿಸಿದ್ದರಿಂದ ಊರವರು ಕಂಗಾಲಾದರು. ಯಾವ ಮದ್ದಿಗೂ ಹೋಗದ ಈ ರೋಗದಿಂದ ಸ್ಥಳೀಯರು ಅಕ್ಷರಶಹ ತತ್ತರಿಸಿಹೋದರು. ತಮಗೆ ಯಾವುದೋ ಗಂಡಾಂತರ ಎದುರಾಗಿದೆ ಎಂದು ಊರವರು ಕಂಗಾಲಾದರು.
ಉಳಿಪಾಡಿ ಗುತ್ತಿಗೆ ಓಡಿದ ಜನರು:
ಮಳಲಿಯಲ್ಲಿ ಇಂದಿಗೂ ಉಳಿಪಾಡಿಗುತ್ತು ಎಂಬ ಗುತ್ತಿನ ಮನೆ ಇದೆ. ದಿ.ರಮೇಶ್ ನಾಯ್ಕ ಅದರ ಯಜಮಾನ. ಊರವರೆಲ್ಲಾ ತಮಗೆ ಬಂದ ಗಂಡಾತರದ ಬಗ್ಗೆ ಕೇಳಿದ ರಮೇಶ ನಾಯ್ಕ ಅವರು ಊರಿನ ದೈವವಾದ ಕೋರಿದಬ್ಬುವಿನಲ್ಲಿ ಪ್ರಶ್ನೆ ಕೇಳೋಣ ಎಂದು ಮಾತುಕೊಟ್ಟರು. ಅದರಂತೆ ಮಳಲಿಯ ಶಾಲೆ ಬಳಿ ಇರುವ ಕೋರಿದಬ್ಬು ದೈವದ ಮಾಣೆಚ್ಚಿ(ದೈವದರ್ಶನ) ಮಾಡುವ ಬಗ್ಗೆ ಮಾತುಕತೆ ನಡೆಯಿತು.
ದೈವದರ್ಶನದಲ್ಲಿ ಹೇಳಿದ್ದೇನು?
ಕೋರಿದಬ್ಬು ದೈವದ ದರ್ಶನ ಶುರುವಾದಾಯಿತು. ಜನರು ತಮಗಾದ ಸಂಕಷಟವನ್ನು ತೋಡಿಕೊಂಡಾಗ ದೈವ ಅಭಯ ನೀಡಿತು. ಊರಿಗೆ ಬಂದ ಕಷ್ಟವನ್ನು ಕಳೆಯುತ್ತೇನೆ. ಊರಿಗೆ ಮಾರಿ ಬಂದಿದೆ, ಪ್ರತಿ ವರ್ಷ ಕಾತರ್ೆಲ್(ಜೂನ್)ನತಿಂಗಳ ಸಂಕ್ರಮಣದಂದು ರಾಹುಗುಳಿಗನ ಕಲ್ಲಗೆ ಕೋಳಿಯ ತರ್ಪಣ ಕೊಡಬೇಕು. ಪೊಳಲಿಯ ದೇವಿಗೆ ಹೂವಿನ ಪೂಜೆಯನ್ನು ವರ್ಷಂಪ್ರತಿ ಕೊಟ್ಟರೆ ಊರಿಗೆ ಬಂದ ಸಂಕಷ್ಟವನ್ನು ಪರಿಹರಿಸುತ್ತೇನೆ ಎಂದು ದೈವ ಅಭಯ ನೀಡಿತು.
ದೈವದ ಮಾತಿನಂತೆ ದೈವಸ್ಥಾನದ ಮುಂದೆ ಕಲ್ಲೊಂದನ್ನು ಪ್ರತಷ್ಠಾಪಿಸಿ ಅದಕ್ಕೆ ಊರಿನ ಪ್ರತಿ ಮನೆಯವರು ಕೋಳಿ ತರ್ಪಣ ನೀಡತೊಡಗಿದರು. ಇದಾದ ಕೆಲವೇ ದಿನಗಳೆಂಬಂತೆ ಊರಿಗೆ ಬಂದಿದ್ದ ಮಹಾಮಾರಿ ಹಸಿರು ಹುಳುಗಳು ಹೇಳದೆ ಕೇಳದೆ ಮಾಯವಾದವು. ಸಾಂಕ್ರಾಮಿಕ ರೋಗವಾಗಿದ್ದ ಬೇಧಿ ಮಾಯವಾಯಿತು. ಅಲ್ಲಿಂದ ಇಂದಿಗೂ ಪ್ರತೀ ವರ್ಷ ಕಾತರ್ೆಲ್ ಮಾಸದ ಸಂಕ್ರಮಣದಂದು ಕೋಳಿ ತರ್ಪಣ ಕೊಡುವ ಕ್ರಮ ಜರೂರತ್ತಾಗಿ ನಡೆದುಕೊಂಡು ಬರುತ್ತಾ ಇದೆ.
ಕಾಜಿಲದ ಮುಂಡಾಲರಿಂದ ವಿಧಿವಿಧಾನ:
ಕೋರಿದಬ್ಬು ದೈವದ ಪೂಜೆಯನ್ನು ಮಾಡುವವರು ಕಾಜಿಲ ಎಂಬಲ್ಲಿನ ಮುಂಡಾಲ ಜನಾಂಗದವರು, ಇವರೇ ದೈವದ ಚಾಕಿರಿ(ಸೇವೆ) ಮಾಡುತ್ತಾ ಬರುತ್ತಾರೆ. ಪ್ರತೀ ಸಂಕ್ರಮಣದಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಪ್ರತೀ ತಿಂಗಳು ಮಾಣೆಚ್ಚಿ(ದೈವ ದರ್ಶನ) ನಡೆಸಿಕೊಡುತ್ತಾರೆ. ದಲಿತರಿಂದ ಪೂಜೆ ಪಡೆಯುವ ಕೋರಿದಬ್ಬು ಸಂತುಷ್ಟನಾಗುತ್ತಾನಂತೆ. ದೈವಸ್ಥಾನದ ಉಸ್ತುವಾರಿಯನ್ನು ಉಳಿಪಾಡಿ ಗುತ್ತಿನ ಮನೆಯವರು ವಹಿಸಿಕೊಂಡಿದ್ದಾರೆ.
ಈ ಬಾರಿಯೂ ಜೂನ್ ತಿಂಗಳಂದು ಕೋರಿದಬ್ಬು ದೈವಕ್ಕೆ ಕೋಳಿ ತರ್ಪಣ ನಡೆಯುತ್ತದೆ. ಪೊಳಲಿಗೆ ಹೋಗಿ ಹೂವಿನ ಪೂಜೆ ಸಲ್ಲಿಸಿದ ಬಳಿಕ ಇಲ್ಲಿ ಪೂಜೆ ನಡೆಯಲು ಆರಂಭವಾಗುತ್ತದೆ. ಈ ಕಾರ್ಯಕ್ಕೆ ಪ್ರತೀ ಮನೆಯವರು ಇಂತಿಷ್ಟು ವಂತಿಗೆ ಹಾಗೂ ಒಂದೊಂದು ದೊಡ್ಡ ಗಾತ್ರದ ಕೋಳಿಯ ಬಲಿ ಕೊಡುತ್ತಾ ಬರುತ್ತಿದ್ದಾರೆ. ದೈವಸ್ಥಾನದ ಎದುರಿರುವ ಮಾರಿಕಟಲ್ಲಿಗೆ ಕೋಳಿಯನ್ನು ಕೊಯ್ದು ಕೋಳಿಯ ರಕ್ತದಿಂದ ತೇವಗೊಳಿಸಲಾಗುತ್ತಿದೆ. ಮುಂಡಾಲ ಜನಾಂಗದ ವ್ಯಕ್ತಿ ಈ ರೀತಿ ಕೋಳಿಯನ್ನು ಕೊಯ್ಯುತ್ತಾರೆ.
ಸಾವಿರಕ್ಕೂ ದಾಟುವ ಕೋಳಿ ಸಂಹಾರ:
ಒಂದೇ ಬಾರಿಗೆ ಅಲ್ಲಿ ಸಾವಿರಕ್ಕೂ ಅಧಿಕ ಕೋಳಿಗಳನ್ನು ಸಂಹಾರ ಮಾಡಲಾಗುತ್ತದೆ. ಈ ವೇಳೆ ಪ್ರತೀ ಮನೆಯ ಒಬ್ಬೊಬ್ಬ ವ್ಯಕ್ತಿಗಳು ಕೋಳಿಯನ್ನು ಹಿಡಿದು ತಂದು ಅದನ್ನು ಕೊಯ್ಯಿಸಿ ಅದರ ಮಾಂಸವನ್ನು ಪ್ರಸಾದ ವಾಗಿ ಸ್ವೀಕರಿಸುತ್ತಾರೆ. ಕೋಳಿಯನ್ನು ಕೊಯ್ದ ಬಳಿಕ ಅದನ್ನು ಸಾಮೂಹಿಕವಾಗಿ ನೆಲದಲ್ಲಿ ಬಿಡಲಾಗುತ್ತದೆ. ಕೊನೆಗೆ ಮತ್ತೊಂದು ಸುತ್ತಿನ ಪೂಜೆ ನಡೆದು ಅದಕ್ಕೆ ದೈವದ ತೀರ್ಥ(ಕುರಿನೀರು: ಅರಶಿನ ಹಾಗೂ ಸುಣ್ಣದಿಂದ ಮಾಡಿದ ದ್ರಾವಣ)ವನ್ನು ಚಿಮುಕಿಸಿದ ನಂತರ ತರ್ಪಣ ನೀಡಲಾದ ಕೋಳಿಯನ್ನು ತೆಗೆದುಕೊಂಡು ಹೋಗುವ ಕ್ರಮ ಇದೆ.
ಯಾವುದೇ ವೈಜ್ಞಾನಿಕ, ತಾಕರ್ಿಕ ನಿಲುವಿಗೆ ಸಿಲುಕದ ಅಲೌಖಿಕವಾದ ಪೂಜಾ ಕ್ರಮ ಕ್ರಮ ಇಲ್ಲಿ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಕೋಳಿ ಕೊಯ್ದ ಮುಂಡಾಲ ವ್ಯಕ್ತಿಗೆ ಕೋಳಿ ಕೊಯ್ದದಕ್ಕೆ ಎರಡು ರೂ ದಕ್ಷಿಣೆ ನೀಡಲಾಗುತ್ತದೆ. ಅಲ್ಲದೆ ಕೋಳಿಯ ತಲೆಯನ್ನು ಆತನಿಗೆ ನೀಡಲಾಗುತ್ತದೆ.
-ಗಿರೀಶ್ ಮಳಲಿ






