ಗುರುಪುರ : ಕಟ್ಟಿಗೆಯ ಎಲ್ಲೆಡೆ ಅಭಾವ ಉಂಟಾಗಿದ್ದು, ಮಹಿಳೆಯರು ಅಡುಗೆ ಕೋಣೆಯಲ್ಲಿ ಹೊಗೆಮುಕ್ತರಾಗುವ ದೂರದೃಷ್ಟಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಉಚಿತ ಅನಿಲ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಲ್ಲಿ ಈಗಲೂ 200ಕ್ಕೂ ಹೆಚ್ಚು ಮಹಿಳೆಯರಿಗೆ ಅನಿಲ ಸಂಪರ್ಕ ಸಿಕ್ಕಿಲ್ಲ ಎಂಬುದು ಇಂದಿನ ಕಾರ್ಯಕ್ರಮದಲ್ಲಿ ಆ ಮಹಿಳೆಯರು ಉಜ್ವಲ ಅನಿಲ ಸಂಪರ್ಕ ಪಡೆದಾಗಲೇ ತಿಳಿದು ಬಂತು. ಮಹಿಳೆಯರ ಪಾಲಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಲಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆಶಿಸಿದರು.
ಗುರುಪುರ ಜಂಗಮ ಮಠದೆದುರು ಹಮ್ಮಿಕೊಳ್ಳಲಾದ ಕೇಂದ್ರದ ಉಜ್ವಲ ಅನಿಲ ಭಾಗ್ಯದ ಫಲಾನುಭವಿಗಳಿಗೆ ಉಚಿತ ಅನಿಲ ಸಿಲಿಂಡರ್, ಗ್ಯಾಸ್ ಒಲೆ ಹಾಗೂ ಇತರ ಪರಿಕರ ವಿತರಿಸಲಾದ ಸಾರ್ವಜನಿಕ ಸಮಾರಂಭದಲ್ಲಿ ಶಾಸಕರು ಮಾತನಾಡಿದರು.
ಸಮಾರಂಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅಧಿಕಾರಿ, ತಾಪಂ ಸದಸ್ಯ ವಿಶ್ವನಾಥ ಶೆಟ್ಟಿ, ಭಾರತ್ ಗ್ಯಾಸ್ ವಿತರಣೆ(ಕೈಕಂಬ) ಅಧಿಕಾರಿ ಪ್ರವೀಣ್, ಬಿಜೆಪಿ ಗುರುಪುರ ವಲಯಾಧ್ಯಕ್ಷ ರಾಜೇಶ ಸುವರ್ಣ, ಕೊಳಂಬೆ ಸುಧಾಕರ ಮೊದಲಾದವರು ಇದ್ದರು.
