ಉಡುಪಿ, ಸೆ.12: ಕೊಲೆ ಕೃತ್ಯವನ್ನೇ ಅಡ್ಡ ಕಸುಬಾಗಿ ಮಾಡಿಕೊಂಡು ಪಾತಕ ಲೋಕದಲ್ಲಿ ಗುರುತರವಾದ ಹಿನ್ನೆಲೆಯನ್ನು ಹೊಂದಿರುವ ಉಡುಪಿಯ ಕುಖ್ಯಾತ ರೌಡಿ ಪಿಟ್ಟಿ ನಾಗೇಶ್ ಯಾನೆ ನಾಗೇಶ್ (38)ನು ಕೊನೆಗೂ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಬರ್ಬರವಾಗಿ ಕಡಿದು ಕೊಲೆಗೈದು ತನ್ನ ರಕ್ತ ಸಿಕ್ತ ಬದುಕನ್ನು ರಕ್ತದ ಮಡುವಿನಲ್ಲಿಯೇ ಕೊನೆಗಾಣಿಸಿದ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಹಲಿಮಾ ಸಾಬ್ಜು ಆಡಿಟೋರಿಯಂನ ಎದುರು ನಡೆದಿದ್ದು ಈ ಕೊಲೆಗೆ ಸಂಭಂಧಿಸಿದಂತೆ ಉಡುಪಿ ಜಿಲ್ಲಾ ಅಪರಾಧ ದಳದಿಂದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿಟ್ಟಿ ನಾಗೇಶನ ಕೊಲೆ ಕೃತ್ಯಕ್ಕೆ ಸಂಭಂದಿಸಿದಂತೆ ಇಂದು ಬೆಳಿಗ್ಗೆ ಕೊರಂಗ್ರಪಾಡಿ ವಿಶ್ವನಾಥ್, ಅಲೆವೂರಿನ ಗುರುಪ್ರಸಾದ, ಮುನ್ನಾ, ನಂದಗೋಕುಲದ ಸಂತೋಷ್, ಹಾಗೂ ಕುಕ್ಕಟ್ಟೆಯ ಝಾಕೀರ್ ಎಂದು ಗುರುತಿಸಲಾಗಿದೆ.
ಪಿಟ್ಟಿ ನಾಗೇಶನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಫೋರ್ಡರ್ ಫಿಯೆಸ್ತಾ ಟೂರಿಸ್ಟ್ ಕಾರಿನಲ್ಲಿ ಬರುತ್ತಿದ್ದ ವೇಳೆ ಈ ಕೃತ್ಯ ನಡೆಸಲಾಗಿದೆ. ಪಿಟ್ಟಿ ನಾಗೇಶ್ ಸಂಚರಿಸುತ್ತಿದ್ದ ಕಾರನ್ನು ಇನ್ನೊಂದು ಗುಂಪು ವ್ಯವಸ್ಥಿತವಾಗಿ ಕಾರಿನಲ್ಲಿ ಹಿಂಬಾಲಿಸಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಉದ್ಯಾವರ ಹಲಿಮಾ ಸಾಬ್ಜು ಆಡಿ ಟೋರಿಯಂನ ಎದುರು ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ನಾಗೇಶ್ನನ್ನು ಕಾರಿನಿಂದ ಹೊರಗೆಳೆದು ಆತನ ಮುಖ, ಎದೆ, ಹೊಟ್ಟೆಗೆ ಮಾರಕಾಯುಧಗಳಿಂದ ಮನ ಬಂದಾಗೆ ಕಡಿದು ಪರಾರಿಯಾಗಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಪಿಟ್ಟಿ ನಾಗೇಶ್ ರಸ್ತೆ ಬದಿಯಲ್ಲಿನ ಕೆಸರಿಗೆ ಬಿದ್ದು ಅಲ್ಲೇ ಮೃತಪಟ್ಟಿದ್ದಾನೆ.
ಮುಖಕ್ಕೆ ತೀವ್ರವಾಗಿ ಮಾರಕಾಯುಧದಿಂದ ಕೊಚ್ಚಿದ್ದರಿಂದ ಆತನ ಗುರುತು ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗಿರಲ್ಲಿ. ಬಳಿಕ ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಫೋನ್ ನೆರವಿನಿಂದ ಪೊಲೀಸರು ನಾಗೇಶನ ಗುರುತು ಪತ್ತೆ ಹಚ್ಚಿದರು. ಘಟನಾ ಸ್ಥಳದಲ್ಲಿ ಕೊಲೆಗೆ ಬಳಸಿದ ತಲವಾರು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಟ್ಟಿ ನಾಗೇಶನ ಕರಾಳ ಇತಿಹಾಸವು ವಿಭಿನ್ನವಾಗಿದೆ. ಸಾಮಾನ್ಯ ರಿಕ್ಷಾ ಚಾಲಕನಾಗಿದ್ದ ನಾಗೇಶ್ ಸಹವಾಸ ದೋಷದಿಂದ ಪಾತಕಲೋಕಕ್ಕೆ ಗೊತ್ತಿಲ್ಲದೇ ಜಾರಿ ಬಿಟ್ಟಿದ್ದ ಕೊನೆಗೆ ಅದರಿಂದ ಹೊರಬರಲಾರದೇ ತೊಳಲಾಡುತ್ತಲೂ ಇದ್ದ ಈಗ ಕೊಲೆ ಮಾಡಿದವ ಕೊಲೆಯಾಗಿ ಹೋಗುತ್ತಾನೆ ಎಂಬ ಅಪರಾಧ ಲೋಕದ ಮಾತಿಗೆ ಮತ್ತೆ ಸಾಕ್ಷಿ ಬರೆದಿದ್ದಾನೆ.
2006ರಲ್ಲಿ ಒಂದು ಕಾಲದ ಸ್ನೇಹಿತನೆ ಆಗಿದ್ದ ಹಾಗೂ ಹಲವಾರು ಬಾರಿ ತನ್ನನ್ನು ಅಪರಾಧ ಲೋಕದಲ್ಲಿ ರಕ್ಷಿಸಿದ್ದ ಪತ್ರಕರ್ತ ಹಿತೇಂದ್ರ ಪ್ರಸಾದ್ನನ್ನು ಒಟ್ಟಿಗೆ ಮಣಿಪಾಲದಲ್ಲಿನ ಪಬ್ವೊಂದಕ್ಕೆ ದಾಳಿ ನಡೆಸಲು ಕರೆದುಕೊಂಡು ಹೋಗಿ ಅಲ್ಲಿ ಹೊರಭಾಗದಲ್ಲಿಯೇ ಆತನನ್ನು ಕೊಲೆ ಮಾಡಿದ ಗಂಭೀರ ಆರೋಪ ಪಿಟ್ಟಿಯ ಮೇಲಿತ್ತು. ಮತ್ತು 2011ರಲ್ಲಿ ನಡೆದ ಮತ್ತೊಂದು ಕೊಲೆಯು ಸಹ ಪಿಟ್ಟಿ ನಾಗೇಶನ ಪಾರುಪತ್ಯಕ್ಕೆ ಸಾಕ್ಷಿಯಾಗಿತ್ತು. ಒಟ್ಟಿಗೆ ಬೆಳೆದಿದ್ದ ಸ್ನೇಹಿತ ವಿನೋದ್ ಶೆಟ್ಟಿಗಾರನ ವಿರೋಧ ಕಟ್ಟಿಕೊಂಡ ನಾಗೇಶ್ ಅವನ ಸಹಚರರಿಂದ ಹಲವಾರು ಬಾರಿ ಕೊಲೆ ಕೃತ್ಯದಿಂದ ತಪ್ಪಿಸಿಕೊಂಡಿದ್ದನಲ್ಲದೇ ಆತನನ್ನೇ ಮುಗಿಸಲು ಉಡುಪಿಯ ಜೈಲನ್ನೇ ಬಳಸಿಕೊಂಡು ಯಶಸ್ಸಾಗಿದ್ದನು. ಈಎರಡೂ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಇದಲ್ಲದೆ ಹಲವು ಕೊಲೆಯತ್ನ, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. 2011ರಲ್ಲಿ ವಿನೋದ್ ಶೆಟ್ಟಿಗಾರ್ ತಂಡವು ಈತನ ಕೊಲೆಗೆ ವಿಫಲ ಯತ್ನ ನಡೆಸಿತ್ತು. ವಿನೋದ್ ಶೆಟ್ಟಿಗಾರ್ ಹತ್ಯೆಗೆ ಪ್ರತೀಕಾರವಾಗಿ ಆತನ ಸಹಚರರೇ ಪಿಟ್ಟಿ ನಾಗೇಶ್ನನ್ನು ಕೊಲೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಿಟ್ಟಿ ನಾಗೇಶನು ಮಂಗಳೂರಿಗೆ ತೆರಳಿದ್ದು ಯಾಕೆ..? ಅವನು ಅಲ್ಲಿ ಎಲ್ಲಿಗೆ..? ಯಾರನ್ನು ಭೇಟಿಯಾದ..? ಹಾಗೂ ಅವನ ಚಲನವಲನವನ್ನು ನೋಡುತ್ತಿದ್ದವರು ಯಾರು ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಂಡು ಈ ಹತ್ಯೆಯ ನಿಜಾಂಶವನ್ನು ಅರಿಯಲು ಪ್ರಯತ್ನಿಸುತ್ತಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ರಾಜೇಂದ್ರ ಕುಮಾರ್, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕಾರ್ಕಳ ಎಎಸ್ಪಿ ಅಣ್ಣಾಮಲೈ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂದವರು ಯಾರು..?
ಪಿಟ್ಟಿ ನಾಗೇಶನ ಕೊಲೆ ಕೃತ್ಯಕ್ಕೆ ಸಂಭಂದಿಸಿದಂತೆ ಇಂದು ಬೆಳಿಗ್ಗೆ ಉಡುಪಿ ಅಪರಾಧ ಪತ್ತೆದಳದಿಂದ ಬಂದಿನರಾದವರನ್ನು ಕೊರಂಗ್ರಪಾಡಿ ವಿಶ್ವನಾಥ್, ಅಲೆವೂರಿನ ಗುರುಪ್ರಸಾದ, ಮುನ್ನಾ, ನಂದಗೋಕುಲದ ಸಂತೋಷ್, ಹಾಗೂ ಕುಕ್ಕಟ್ಟೆಯ ಝಾಕೀರ್ ಎಂದು ಗುರುತಿಸಲಾಗಿದೆ. ಇವರಿಗೂ ಹಾಗೂ ಪಿಟ್ಟಿ ನಾಗೇಶನಿಗೂ ವಯುಕ್ತಿಕ ದ್ವೇಷವಿದ್ದು ಇವರಲ್ಲಿ ಮುನ್ನ ಎಂಬುವವನನ್ನು ಪಿಟ್ಟಿ ನಾಗೇಶ ಕೊಲೆ ಮಾಡಲು ಸಂಚು ರೂಪಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ತನ್ನ ಹಳೆಯ ಸ್ನೇಹಿತ ಕೊರಂಗ್ರಪಾಡಿ ವಿನೋದ್ ಶೆಟ್ಟಿಗಾರನ ಹತ್ಯೆಯ ಪ್ರಮುಖ ಸೂತ್ರಧಾರಿಯಾಗಿದ್ದ ಪಿಟ್ಟಿ ನಾಗೇಶನನ್ನು ಮುಗಿಸಲು 2011ರ ಫೆಬ್ರವರಿ 11ರಂದು ರಾತ್ರಿ ಇಂದ್ರಾಳಿ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ಪಿಟ್ಟಿ ನಾಗೇಶನನ್ನು ಅಟ್ಟಾಡಿಸಿ ಹತ್ಯೆ ಮಾಡಲು ಮಚ್ಚು ಬೀಸಿದ್ದು ಅದರಿಂದ ಚೇತರಿಸಿಕೊಳ್ಳಲು ಬರೋಬ್ಬರಿ ವರ್ಷವೇ ಆಗಿತ್ತು. ಈಗ ಅದೇ ತಂಡವೇ ಈ ಕೊಲೆಯಲ್ಲಿ ಯಶಸ್ಸಾಗಿದೆ ಎಂಬ ಬಲವಾದ ಸಂಶಯದಿಂದ ಪೊಲೀಸರು ಆ ತಂಡವನ್ನು ನಿನ್ನೆ ರಾತ್ರಿಯಿಂದ ಜಿಲ್ಲೆಯಲ್ಲಿ ನಾಕಾಬಂದಿ ಮಾಡಿಕೊಂಡು ಶೋಧನೆ ನಡೆಸಿದ್ದರು. ಅಂದು ಹಲ್ಲೆ ಮಾಡಿದ ತಂಡದಲ್ಲಿದ್ದವರನ್ನು ಹುಡುಕಲು ಪ್ರಾರಂಭಿಸಿದ್ದು ಅದರಲ್ಲಿ ಯಶಸ್ಸಾಗಿದ್ದು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ್ದು ಅವರು ಕೃತ್ಯಕ್ಕೆ ಬಳಸಿದ್ದ ನೀಲಿ ಮಾರುತಿ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇನ್ನಷ್ಟು ಮಂದಿ ಈ ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ಒಟ್ಟು ಮೂರು ಪೊಲೀಸ್ ತಂಡವು ಆರೋಪಿಗಳನ್ನು ಹುಡುಕಾಡುತ್ತಿದ್ದು ಉಡುಪಿ, ಮಂಗಳೂರು, ಕುಂದಾಪುರದಲ್ಲಿ ತಲಾಶೆಯಲ್ಲಿದೆ ಎನ್ನಲಾಗಿದೆ.

