ಸುದ್ದಿ9 ಕೈಕಂಬ: ದೂರದೂರಿನಿಂದ ಬಂದು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನೆಲೆನಿಂತಿರುವ ಉತ್ತರಕರ್ನಾಟಕ ಮೂಲದ ವ್ಯಕ್ತಿಯೋರ್ವರು ಗಣಪನ ಮೂರ್ತಿಯನ್ನು ರಚಿಸಿ, ಭಯಭಕ್ತಿಯಿಂದ ಪೂಜಿಸಿ ತಪೋವನದ ಬಾವಿಗೆ ವಿಸರ್ಜಿಸಿದ್ದಾರೆ. ಉತ್ತರಕರ್ನಾಟಕ ಮೂಲದ ಮೌಲಾನಾ ಎಂಬ ವ್ಯಕ್ತಿ ಈ ರೀತಿ ಆಧ್ಯಾತ್ಮಿಕ ಸಾಧನೆ ಮಾಡಿದ ವ್ಯಕ್ತಿ.

ಸದ್ಯ ಪೊಳಲಿಯ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿಯೊಂದಿಗಿರುವ ಇವರು ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ದೇವರ ಬಗ್ಗೆ ಅಪಾರ ಭಯಭಕ್ತಿ ಹೊಂದಿರುವ ಮೌಲಾನ ಅವರು ರಾಮಕೃಷ್ಣ ತಪೋವನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿದ್ದಾರೆ.
ಆ.29ರಂದು ಹಿಂದೂದೇವರಾದ ಗಣಪನ ವಿಗ್ರಹವನ್ನು ಏಕಾಗ್ರತೆಯಿಂದ ರಚಿಸಿ ಮಣ್ಣಿನ ಹೃಣ್ಮನ ಮೂರ್ತಿಯನ್ನು ರಚಿಸಿದ್ದಾರೆ. ಸಾಧಾರಣವಾಗಿ ಒಂದಡಿಗಿಂತಲೂ ಹೆಚ್ಚು ಎತ್ತರವಿರುವ ಈ ಗಣಪನಲ್ಲಿ ಒಂದು ವಿಶೇಷವಿದೆ. ಅದೇನೆಂದರೆ ಈ ಗಣಪನನ್ನು ಜೇಡಿಮಣ್ಣಿನಿಂದ ತಯಾರಿಸಲಾಗಿದ್ದು ಇದಕ್ಕೆ ಯಾವುದೇ ರಾಸಾಯನಿಕ ಬಣ್ಣಗಳನ್ನಾಗಲೀ, ರಾಸಾಯನಿಕ ಅಂಟುದ್ರವವನ್ನಾಗಲೀ ಉಪಯೋಗಿಸಿಲ್ಲ. ಕೇವಲ ಮಣ್ಣಿನಿಂದಲೇ ತಯಾರಿಸಲಾದ ಗಣಪನಿಗೆ ಆಧ್ಯಾತ್ಮಿಕ ಶಕ್ತಿ ಹೆಚ್ಚಿರುತ್ತದೆ ಎಂದು ಆಧ್ಯಾತ್ಮ ಪಂಡಿತರು ಅಭಿಪ್ರಾಯಪಡುತ್ತಾರೆ.
ಅಷ್ಟು ಮಾತ್ರವಲ್ಲದೆ ಈ ಗಣಪನಿಗೆ ನಿತ್ಯವೂ ಭಯಭಕ್ತಿಯಿಂದ ಪೂಜಿಸುವ ಮೌಲಾನಾ ಅವರು ಗಣಪನಿಗೆ ಸಿಗಬೇಕಾದ ಸಕಲ ಪೂಜೆಯನ್ನೂ ಸಲ್ಲಿಸಿದ್ದಾರೆ. ಬೆಳಗ್ಗೆ ಪ್ರತಿಷ್ಠಾಪಿಸಿ ಸಕಲಪೂಜೆ ಸಲ್ಲಿಸಿದ ಬಳಿಕ ತಪೋವನದ ಬಾವಿಯಲ್ಲಿ ಸಮರ್ಪಣೆ ಮಾಡಲಾಯಿತು.
ಗಣಪನ್ನು ವಿಸರ್ಜಿಸಿದ ಬಳಿಕ ಈ ಬಾವಿ ಪಾವನವಾಗಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.













