ಉಡುಪಿ: ಪೆರ್ಡೂರಿನಲ್ಲಿ ಜಾನುವಾರು ವ್ಯಾಪರಿ ಹುಸೇನಬ್ಬ ಸಾವಿನ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರನ್ನು ಹಾಗೂ ಈ ಪ್ರಕರಣದಲ್ಲಿ ಶಾಮೀಲಾದ ಎಸ್.ಐ ಡಿ.ಎನ್ ನಾಯಕ್ ಹಾಗೂ ಮೂವರು ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ಇದನ್ನು ಖಂಡಿಸಿ ಬಿಜೆಪಿ ಉಡುಪಿ ಘಟಕದ ವತಿಯಿಂದ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕ ರಾಜ್ಯ ಸರಕಾರ ಪ್ರಮಾಣಿಕವಾಗಿ ಈ ಘಟನೆಯಲ್ಲಿ ಏನಾಯಿತು ಎಂಬುದನ್ನು ತಿಳಿಯಬೇಕಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದನಗಳನ್ನು ಹಗ್ಗ ಕಡಿದು ತೆಗೆದುಕೊಂಡು ಹೋದಾಗ ಯಾರು ಕೇಳಲಿಲ್ಲ. ಮೊನ್ನೆ ಪೆರ್ಡೂರಿನಲ್ಲಿ ದನಗಳನ್ನು ಕದ್ದು ಹುಸೇನಬ್ಬ ಮತ್ತು ಆತನ ಸಂಗಡಿಗರು ಸಾಗಿಸುತ್ತಿದ್ದರು. ಅದರಲ್ಲಿ ಎರಡು ದನಗಳು ಸತ್ತು ಹೋಗಿತ್ತು ಆದರೆ ಇದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಕಾರ್ಪಿಯೋ ಜಖಂ ಮಾಡಿದವರು ಅವರೇ, ಖಂಡಿತ ನಮ್ಮ ಕಾರ್ಯಕರ್ತರಲ್ಲ. ನಮ್ಮ ಸಂಘಟನೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಿದ್ದೇವೆ. ದನ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ವಿನಾಹ ಕಾನೂನು ಕೈಗೆತ್ತಿಕೊಳ್ಳಬಾರದೆಂದು ನಿರ್ಧರಿಸಿದ್ದೇವೆ ಎಂದರು.
ಹೃದಯ ಕಾಯಿಲೆ ಇರುವ ಹುಸೇನಬ್ಬ ಸಿಕ್ಕಿದ ನಂತರ ಪೊಲೀಸ್ ಚೀಪಿನಲ್ಲಿ ಹತ್ತಿಪ್ಪತ್ತು ಕಿ.ಲೋ ಮೀಟರ್ ಪಯಣ ಮಾಡಿಸಿದ್ರು, ಪೊಲೀಸರನ್ನು ನೋಡಿ ಹೆದರಿ ಹೃದಯಾಘತವಾಗಿ ಸಾವನ್ನಪ್ಪಿದ್ದಾರೆಂದು ತಿಳಿಸಿದರು.
ಕುಮಾರಸ್ವಾಮಿಯವರ, ಉನ್ನತ ಅಧಿಕಾರಿಗಳ ಒತ್ತಡಕ್ಕೆ ನಮ್ಮ ಜಿಲ್ಲೆಯ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರುವ ವರೆಗೆ ಯಾಕೆ ಕಾಯಲಿಲ್ಲ ಎಂದು ಪ್ರಶ್ನಿಸಿದರು.
ದುರುದ್ದೇಶದಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕರ್ನಾಟಕ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಿ ಎಂದು ಆಗ್ರಹಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಸೂಕ್ಷ್ಮ ಜಿಲ್ಲೆಗಳು ಇಲ್ಲಿ ರಫೀಕ್ ನಂತಹ ಅಧಿಕಾರಿಗಳನ್ನು ಹಾಕಬೇಡಿ. ಅನಾವಶ್ಯಕವಾಗಿ ಬಿಜೆಪಿ ಪರ ಕೆಲಸ ಮಾಡ್ತಾನೆ. ಕೇಸರಿ ಶಾಲ್ ಹಾಕ್ತಾನೆ ಅನ್ನುವಂತಹ ಏಕೈಕ ದುರುದ್ದೇಶ ಇಟ್ಟುಕೊಂಡು ಬಂಧನ ಮಾಡುವ ಕೆಲಸ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಶಾಸಕ ರಘುಪತಿ ಭಟ್ ಮಾತಾಡಿ, 2005 ರಲ್ಲೂ ಈ ಘಟನೆ ಸಂಭವಿಸಿತ್ತು, ಮತ್ತು ಅಂದು ಬೆತ್ತಲೆ ಪ್ರಕರಣ ಎಂದು ಪ್ರಚಾರವಾಗಿತ್ತು, ಅದನ್ನು ನಮ್ಮ ಕಾರ್ಯಕರ್ತರು ಎದುರಿಸಿದ್ದರು. ಪೊಲೀಸರು ಗೊಕಳ್ಳರನ್ನು ತಡೆಯುವ ಕೆಲಸ ಮಾಡಿದ್ದಾರೆ ಅವರೊಂದಿಗೂ ನಾವು ನಿಲ್ಲಬೇಕು ಎಂದ ಅವರು, ಗೋವನ್ನು ರಕ್ಷಣೆ ಮಾಡಿದಂತಹ ಕಾರ್ಯಕರ್ತರು ತಮ್ಮನ್ನು ಪೊಲೀಸರ ವಶಕ್ಕೆ ನೀಡಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಲಾಲಜಿ ಮೆಂಡನ್, ಕೋಟ ಶ್ರೀ ನಿವಾಸ ಪೂಜಾರಿ, ಮಟ್ಟಾರ್ ರತ್ನಾಕರ್ ಹೆಗ್ಢೆ, ಡಾ. ವಾದಿರಾಜು, ಸುನೀಲ್ ಮುಂತಾದವರು ಉಪಸ್ಥಿತರಿದ್ದರು.


