ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್ನ ೨೦೨೧-೨೨ನೇ ಸಾಲಿನ ಗ್ರಾಮಸಭೆ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅಧ್ಯಕ್ಷತೆಯಲ್ಲಿ ಮಾ.19ರಂದು ಶನಿವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮೆಸ್ಕಾಂ ಇಲಾಖೆಯ ಮೇಲ್ವಿಚಾರಕ ಪದ್ಮನಾಭ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಗ್ರಾಮದ ೪ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಕಲ್ಪಿಸಲಾಗಿದ್ದು, ಇನ್ನೊಬ್ಬರಿಗೆ ಶೀಘ್ರ ವಿದ್ಯುತ್ ಲಭಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಡಕಬೈಲ್ನ ನಿವಾಸಿ ಹಮೀದ್ ಎಂಬವರು ತನ್ನ ಮನೆ ಮೇಲ್ಗಡೆ ಹಾದು ಹೋಗಿರುವ ವಿದ್ಯುತ್ ತಂತಿ ಬಗ್ಗೆ ಭೀತಿ ವ್ಯಕ್ತಪಡಿಸಿದರೆ, ಪೊಳಲಿಯ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ಭಟ್ ಮಾತನಾಡಿ, ಶಾಲೆಯಲ್ಲಿ ಬಳಕೆಯಾದ ವಿದ್ಯುತ್ ಬಿಲ್ಗೆ ಸರ್ಕಾರ ೧೮,೦೦೦ ರೂ ಅನುದಾನ ನೀಡುತ್ತಿದ್ದು, ಮೆಸ್ಕಾಂಗೆ ವಾರ್ಷಿಕವಾಗಿ ೬೦,೦೦೦ ರೂ ಮೇಲ್ಪಟ್ಟು ವಿದ್ಯುತ್ ಬಿಲ್ ಸಂದಾಯವಾಗುತ್ತಿದೆ. ಹಾಗಾಗಿ ಶಾಲೆಗಳಿಗೆ ರಿಯಾಯತಿ ದರದಲ್ಲಿ ವಿದ್ಯುತ್ ಪೂರೈಸಲು ಪ್ರಯತ್ನಿಸಬೇಕು ಎಂದರು. ಈ ವಿಷಯ ಮೆಸ್ಕಾಂ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಪದ್ಮನಾಭ ಹೇಳಿದರು.
ಮಳೆಗಾಲದಲ್ಲಿ ಗುಡ್ಡ ಜರಿಯುವ ಸಾಧ್ಯತೆ ಇರುವ ಪುಂಚಮೆಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಅಬ್ದುಲ್ ಜಬ್ಬರ್ ಆಗ್ರಹಿಸಿದರೆ, ಮನೆಮನೆಗೆ ತೆರಳಿ ಗರ್ಭಿಣಿಯರಿಗೆ ಆಹಾರ ವಸ್ತು, ಔಷಧಿ ಒದಗಿಸುವ ವ್ಯವಸ್ಥೆ ಮುಂದುವರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನ್ಸಿಲ್ಲಾ ಪತ್ರಾವೋ ಅವರು ಆರೋಗ್ಯ ಇಲಾಖೆಗೆ ಸಂಬAಧಿಸಿದ ಮಾಹಿತಿ ನೀಡಿದರೆ, ರೇಣುಕಾ ಅವರು ಅಂಗನವಾಡಿಗೆ ಸಂಬAಧಿಸಿದ ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಮಾತನಾಡಿ, ಮಹತ್ವದ ಇಲಾಖೆಗಳ ಅಧಿಕಾರಿಗಳು ಗೈರಾದಲ್ಲಿ ಮುಂದಿನ ಗ್ರಾಮಸಭೆ ರದ್ದುಗೊಳಿಸಲಾಗುವುದು. ಇಂದು ಸ್ಥಳೀಯವಾಗಿ ತಹಶೀಲ್ದಾರರ ಗ್ರಾಮ ವಾಸ್ತವ್ಯ ಇರುವುದರಿಂದ ಇತರ ಇಲಾಖಾ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕರಿಯಂಗಳದಲ್ಲಿ ಆರೋಗ್ಯ ಕೇಂದ್ರದ ಉಪಕೇಂದ್ರ ಸ್ಥಾಪನೆಗೆ ಪ್ರಯತ್ನ ಮುಂದುವರಿದೆ. ಗ್ರಾಮಸ್ಥರು ಹೆಚ್ಚೆಚ್ಚು ನರೇಗಾ ಯೋಜನೆಯ ಪ್ರಯೋಜನ ಪಡೆಯಲು ಮುಂದೆ ಬರಬೇಕು. ಸ್ವ-ಉದ್ಯೋಗದ ದೆಸೆಯಲ್ಲಿ ಪಂಚಾಯತ್ಗೆ ಎನ್ಆರ್ಎಲ್ಎಂ ಕಟ್ಟಡ ಅಗತ್ಯವಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ನೋಡೆಲ್ ಅಧಿಕಾರಿಯಾಗಿದ್ದರು. ಪಂಚಾಯತ್ ಉಪಾಧ್ಯಕ್ಷೆ ವೀಣಾ ಆಚಾರ್ಯ, ಸದಸ್ಯರಾದ ರಾಜು ಕೋಟ್ಯಾನ್, ಲಕ್ಷ್ಮೀಶ್ ಶೆಟ್ಟಿ, ಸಮೀಮ್ ಗಾಣೆಮಾರ್, ಗೀತಾ ಪುಂಚಮೆ, ಲೋಕೇಶ್ ಭರಣಿ, ಅಬ್ದುಲ್ ಖಾದರ್, ಗೀತಾ ಬಡಕಬೈಲ್, ನಾಗವೇಣಿ, ಚಂದ್ರಾವತಿ, ರಾಧಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು. ಲೆಕ್ಕ ಸಹಾಯಕಿ ಭಾರತಿ ವರದಿ ವಾಚಿಸಿದರು. ಪಂಚಾಯತ್ ಪಿಡಿಒ ಮಾಲಿನಿ ಬಿ ವಿ ಸ್ವಾಗತಿಸಿ, ಪ್ರಸ್ತಾವಿಸಿ ವಂದಿಸಿದರು.
