ಕೋಲಾರ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ಮತ್ತು ಸಿಬ್ಬಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲು ಅವಕಾಶ ಕಲ್ಪಿಸುವುದಾಗಿ ಜಿಪಂ ಸಿಇಒ ಜಿ.ಜಗದೀಶ್ ಹೇಳಿದರು.ಮಂಗಳವಾರ ಭಾರತ ಸೇವಾದಳ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಈ ಕುರಿತು ಸಭೆ ನಡೆಸಲು ಮಾಡಿಕೊಂಡ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಷ್ಟ್ರಧ್ವಜ ರಾಷ್ಟ್ರಗೀತೆ ಕುರಿತು ಪ್ರತಿಯೊಬ್ಬ ಭಾರತೀಯರಿಗೂ ಸ್ಪಷ್ಟವಾದ ಮಾಹಿತಿ ಇರಬೇಕಾದುದು ಅತ್ಯಗತ್ಯ.
ಗ್ರಾಮ ಪಂಚಾಯತ್ಗಳಲ್ಲಿ ಪ್ರತಿ ನಿತ್ಯವೂ ರಾಷ್ಟ್ರಧ್ವಜ ಆರೋಹಣ ಅವರೋಹಣ ಮಾಡಬೇಕೆಂಬ ಆದೇಶವಿದೆ. ಆದರೆ ಇದನ್ನು ಪಾಲಿಸುವ ಸಂದರ್ಭದಲ್ಲಿ ಅನೇಕ ಅಚಾತುರ್ಯಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಗ್ರಾಪಂ ಪಿಡಿಒಗಳಿಗೆ ಮತ್ತು ಸಿಬ್ಬಂದಿಗೆ ರಾಷ್ಟ್ರಧ್ವಜ ಸಂಹಿತೆಯನ್ನು ಪರಿಚಯಿಸುವ ಅಗತ್ಯವಿದೆ. ಇದನ್ನು ಭಾರತ ಸೇವಾದಳದ ಸಹಯೋಗದೊಂದಿಗೆ ಆಯೋಜಿಸಲಾಗುವುದು ಎಂದು ಹೇಳಿದರು.
ಕೋಲಾರದ ಪತ್ರಕರ್ತರ ಭವನದಲ್ಲಿ ಆ.8 ರಂದು ಗುರುವಾರ ಕೋಲಾರ ತಾಲೂಕು ಭಾರತ ಸೇವಾದಳವತಿಯಿಂದ ಆಯೋಜಿಸಲಾಗಿರುವ ಶಿಕ್ಷಕರ ಪುನಶ್ಚೇತನ ಶಿಬಿರ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರವನ್ನು ಉದ್ಘಾಟಿಸಲು ಆಗಮಿಸುವುದಾಗಿಯೂ ಅವರು ಒಪ್ಪಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಎನ್.ರವಿಚಂದ್ರ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಹಾಜರಿದ್ದರು.
