ಕೈಕಂಬ: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಎಂಬಲ್ಲಿ ಕಲ್ಕುಡ ದೈವದ ಸವಾರಿ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ಹನ್ನೆರಡು ಗಂಟೆಯ ನಂತರ ಈ ದೈವ ಸವಾರಿ ಹೊರಡುತ್ತಿದೆ ಎಂಬುದು ಸ್ಥಳೀಯರು ತಿಳಿಸಿದ್ದು, ಈ ದೈವದ ಸವಾರಿಯನ್ನು ಕಂಡಿದ್ದಾಗಿ ಅವರ ಅಭಿಪ್ರಾಯವಾಗಿದೆ.

ದೈವವನ್ನು ಕಂಡವರು ಹೇಳಿದ್ದೇನು?
ರಾತ್ರಿ ಹನ್ನೆರಡು ಗಂಟೆಯ ವೇಳೆಯಲ್ಲಿ ಮಳಲಿ ಕಡೆಗೆ ಸಾಗುತ್ತಿದ್ದಾಗ ಲಬ್ಡಬ್ಲಬ್ಡಬ್ ಎಂಬ ಸದ್ದು ಕೇಳುತ್ತದೆ. ಈ ಸದ್ದಿನ ಕಡೆಗೆ ಕಣ್ಣು ಹೊರಳಿಸಿದಾಗ ಕಪ್ಪುಬಣ್ಣದ ವ್ಯಕ್ತಿಯೋರ್ವ ಕಪ್ಪು ಬಣ್ಣ ಧರಿಸಿ, ತೆಂಗಿನ ಸಿರಿ ಧರಿಸಿದ ಆಕೃತಿಯೊಂದು ಕಣ್ಣ ಮುಂದೆ ಬರುತ್ತದೆ. ಜೊತೆಗೆ ಗಗ್ಗರ ಹಾಗೂ ಮಣಿಯ ಸದ್ದು ಕೂಡಾ ಕೇಳುತ್ತದೆ. ದೂರದಿಂದ ಸಾಗಿ ಬರುವ ಈ ಆಕೃತಿ ಹತ್ತಿರವಾಗುತ್ತಿದ್ದಂತೆ ಗಾತ್ರದಲ್ಲಿ ದೊಡ್ಡದಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೀರಲು ಸ್ವರದಲ್ಲಿ ಕಿರುಚುತ್ತದೆ. ಆಮೇಲೆ ತನ್ನ ಪಾಡಿಗೆ ತಾನು ಮಾಯವಾಗುತ್ತದೆ ಎಂದು ದೈವವನ್ನು ಕಂಡ ಹಲವರು ಮಾಹಿತಿ ನೀಡಿದ್ದಾರೆ.
ದೈವ ಕಂಡ ಹಲವರಿಗೆ ಜ್ವರ:
ದೈವ ಕಂಡು ಹಲವರು ಭೀತರಾಗಿದ್ದು, ಎರಡು ಮೂರು ದಿನ ಜ್ವರದಿಂದ ಮಲಗಿದವರೂ ಇದ್ದಾರೆ. ದೈವ ಹತ್ತಿರ ಹೋದಾಗ ಕೋಲದ ಸಂದರ್ಭ ಕಂಡುಬರುವ ಹೂ-ಹಿಂಗಾರದ ಪರಿಮಳವೂ ಬರುತ್ತದೆ. ಅಷ್ಟಕೂ ಇದು ಗುಳಿಗ ದೈವವೋ ಅಥವಾ ಕಲ್ಕೂಡ ದೈವವೋ ಎಂಬುವ ಬಗ್ಗೆ ಸ್ಥಳೀಯರಲ್ಲೀ ಇನ್ನೂ ಜಿಜ್ಞಾಸೆ ಇದೆ. ದೈವದ ಸವಾರಿ ಸಿಕ್ಕಿದಾಗ ಅದರ ಪ್ರಭೆಗೆ ಸೋಂಕಾಗುವ ಸಾಧ್ಯತೆಯೂ ಇದೆ ಎಂದು ಕೆಲವರ ಅಭಿಪ್ರಾಯ. ದೈವದ ಸವಾರಿಯಿಂದಾಗಿ ಹಲವರು ರಾತ್ರಿ ಹತ್ತು ಗಂಟೆಯ ನಂತರ ಇಲ್ಲಿ ಸಂಚರಿಸಲು ಹೆದರುತ್ತಿದ್ದಾರೆ.

