voting123

ಬಂಟ್ವಾಳ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮೇ 12ರ ಬೆಳಗ್ಗೆ 7ರಿಂದ ಸಂಜೆ 6.30ರ ವರೆಗೆ ಮತದಾನ ನಡೆಯಲಿದೆ. ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ 249 ಮತಗಟ್ಟೆಗಳಲ್ಲಿ, ಚುನಾವಣೆಯ ನಿರ್ವಹಣೆಗಾಗಿ 1460 ಸಿಬ್ಬಂದಿ ನಿಯೋಜಿಸಲಾಗಿದೆ.

ಚುನಾವಣೆ ಕರ್ತವ್ಯ ನಿರ್ವಹಿಸುವ ಮತಗಟ್ಟೆಗಳ ಸಿಬ್ಬಂದಿಗಳಿಗೆ ತಾಲೂಕಿನ ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯ ಆವರಣದಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಚುನಾವಣಾ ಇಲಾಖೆಯು ಮತಯಂತ್ರಗಳನ್ನು ಶುಕ್ರವಾರ ಹಸ್ತಾಂತರಿಸಲಾಯಿತು.

ಮತಯಂತ್ರ ಸಹಿತ ಅಗತ್ಯ ವಸ್ತುಗಳನ್ನು ಹೆಗಲೇರಿಸಿಕೊಂಡ ಸಿಬ್ಬಂದಿಗಳು ಉತ್ಸಾಹದೊಂದಿಗೆ ಆಯೋಗ ಸೂಚಿಸಿದ ಮತಗಟ್ಟೆಗಳಿಗೆ ಹೆಜ್ಜೆಹಾಕುತ್ತಿದ್ದ ದೃಶ್ಯಕಂಡು ಬಂತು. ಬಹುತೇಕ ಸಿಬಂದಿಗಳು ಬೆಳಗ್ಗೆ 11ಕ್ಕೆ ಸುಮಾರಿಗೆ ಮತಗಟ್ಟೆಗೆ ತೆರಳಿದ್ದು ಮಧ್ಯಾಹ್ನ ಊಟ, ಸಂಜೆ ಉಪಹಾರ, ರಾತ್ರಿ ಊಟವನ್ನು ಮತಗಟ್ಟೆ ಕೇಂದ್ರಗಳಿಗೆ ಸರಬರಾಜು ವ್ಯವಸ್ಥೆಯನ್ನು ಚುನಾವಣಾ ಆಯೋಗದಿಂದ ವ್ಯವಸ್ಥೆ ಮಾಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ .ವೈ. ರವಿ ತಿಳಿಸಿದ್ದಾರೆ.

ಸಿಬ್ಬಂದಿ ನಿಯೋಜನೆ: ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 1460 ಸಿಬ್ಬಂದಿ ನಿಯೋಜಿಸಲಾಗಿದೆ. 292 ಪ್ರಿಸೈಡಿಂಗ್ ಆಫೀಸರುಗಳು, 291 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್, 877 ಪೋಲಿಂಗ್ ಆಫೀಸರ್, 21 ಸೆಕ್ಟರ್ ಅಕಾರಿಗಳು, ಪ್ರತಿಯೊಂದರಲ್ಲೂ ನಾಲ್ವರನ್ನೊಳಗೊಂಡ 9 ಫ್ಲೈಯಿಂಗ್ ಸ್ಕ್ವಾಡ್, 6 ವಿಡಿಯೋ ಸರ್ವೇಲೆನ್ಸ್ ತಂಡ ಕೆಲಸ ಮಾಡಲಿದೆ.

249 ಮತಗಟ್ಟೆ: ಬಂಟ್ವಾಳ ಕ್ಷೇತ್ರಕ್ಕೆ ಒಟ್ಟು 249 ಮತಗಟ್ಟೆಗಳಿವೆ. ಇವುಗಳಲ್ಲಿ 3 ಎಕ್ಸಿಲರಿ ಮತಗಟ್ಟೆಗಳು ಸೇರಿವೆ. ಸಾಮಾನ್ಯ ಮತಗಟ್ಟೆಗಳು 153, ಸೂಕ್ಷ್ಮ 62, ಅತಿಸೂಕ್ಷ್ಮ 34 ಮತಗಟ್ಟೆಗಳಿವೆ.

ಮತದಾರರು: 2013ರಲ್ಲಿ ಮತದಾರರ ಸಂಖ್ಯೆ 1,92,884 ಇತ್ತು. ಅವರಲ್ಲಿ 1,56,188 ಮತ ಚಲಾಯಿಸಿದ್ದರು. ಈ ಬಾರಿ 1,09,537 ಪುರುಷರು, 1,12,198 ಮಹಿಳೆಯರು ಸೇರಿದಂತೆ 2,21,735 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 28,850 ಹೊಸ ಮತದಾರರ ಸೇರ್ಪಡೆಯಾಗಿದೆ.

ಪಿಂಕ್ ಮತಗಟ್ಟೆ: ಸಂಗಬೆಟ್ಟು ಗ್ರಾಮದ ಕೆರೆಬಳಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿಂಕ್ ಮತಗಟ್ಟೆಯಾಗಿ ಗುರುತಿಸಲಾಗಿದೆ. ಇಲ್ಲಿ 585 ಪುರುಷ ಮತದಾರರರು ಮತ್ತು 608 ಮಹಿಳಾ ಮತದಾರರಿದ್ದು ಒಟ್ಟು 1193 ಮತದಾರರಿದ್ದಾರೆ. ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ, ಪೋಲಿಂಗ್ ಆಫೀಸರ್, ಸುರಕ್ಷ ಸಿಬ್ಬಂದಿಗಳ ಸಹಿತ ಎಲ್ಲಾ ಮಹಿಳಾ ಸಿಬ್ಬಂದಿಗಳಾಗಿರುತ್ತಾರೆ.

By suddi9

Leave a Reply

Your email address will not be published. Required fields are marked *