ಬಂಟ್ವಾಳ; ಬಂಟ್ವಾಳ, ಮೇ 12: ದ.ಕ.ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ಶೇ. 82 ಮತದಾನವಾಗಿದೆ. ಬಂಟ್ವಾಳ ತಾಲೂಕಿನ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ದೋಷದಿಂದ ಗೊಂದಲ. ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹೊರತು ಪಡಿಸಿದರೆ ಬಂಟ್ವಾಳ ಹಾಗೂ ವಿಟ್ಲ ಸೇರಿದಂತೆ ತಾಲೂಕಿನಾದ್ಯಂತ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಹೃದಯಾಘಾತದಿಂದ ಸಾವು: ಕೊಳ್ನಾಡು ಗ್ರಾಮದಲ್ಲಿ ಮತದಾನ ಮಾಡಲು ಆಗಮಿಸುತ್ತಿದ್ದ ವೇಳೆಯೇ ಓರ್ವರು ಹೃದಯಾಘಾತವಾಗಿ ಕುಸಿದು ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿಇರುವ 220ನೇ ಮತಗಟ್ಟೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕುಳಾಲು ತಲೆಂಗಳ ಕರಿಯ ಮುಗೇರರ ಪುತ್ರ ಹರೀಶ್ ಮುಗೇರ ಎಂಬವರೇ ಮೃತಪಟ್ಟ ದುರ್ದೈವಿ.
ಮಧ್ವದಲ್ಲಿ ಮತಯಂತ್ರ ದೋಷ: ಕಾವಳಪಡೂರು ಗ್ರಾಮದ ಮಧ್ವ ಮತಗಟ್ಟೆ 78 ರಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದು ಕೆಲಕಾಲ ಮತದಾನವೇ ವಿಳಂಬವಾಯಿತು. ಬೆಳಿಗ್ಗೆ ಸುಮಾರು 40 ಮತದಾರರು ಮತಚಲಾಯಿಸುವಷ್ಟರಲ್ಲಿ ಒತ್ತಿದ ಗುಂಡಿ ಜಾಮ್ ಆದ ಹಿನ್ನೆಲೆಯಲ್ಲಿ ದೋಷ ಕಂಡುಬಂತು. ಆ ಬಳಿಕ ಬದಲಿಯಾಗಿ 2 ಮತಯಂತ್ರಗಳನ್ನು ಅಳವಡಿಸಿದರೂ ಸರಿಯಾಗಿರಲಿಲ್ಲ. ಮತ್ತೆ ಹೊಸ ಮತಯಂತ್ರ ಅಳವಡಿಕೆ ನಡೆಸಿ 11 ಗಂಟೆಯ ಬಳಿಕ ಮತದಾನ ಸುಸೂತ್ರವಾಗಿ ಮುಂದುವರಿಯಿತು. ಈ ಮಧ್ಯೆ ಮತದಾನಕ್ಕೆ ಬಂದವರು ತಾಸುಗಟ್ಟಲೆ ಮತಗಟ್ಟೆಯ ಬಾಗಿಲಲ್ಲಿ ಕಾಯಬೇಕಾಯಿತು. ಕೊರಗಟ್ಟೆ ಶಾಲೆಯ ಮತಗಟ್ಟೆಯಲ್ಲೂ ಬೆಳಗ್ಗೆ ಯಂತ್ರದಲ್ಲಿ ತೊಂದರೆ ಕಾಣಿಸಿ ಒಂದು ಗಂಟೆ ವಿಳಂಬವಾಗಿತ್ತು.
ಬಂಡಿತಡ್ಕದಲ್ಲೂ ದೋಷ: ಕನ್ಯಾನ ದಕ್ಷಿಣದ ಬಂಡಿತ್ತಡ್ಕ 242ಎ ಮತಗಟ್ಟೆಯಲ್ಲಿ ಬೆಳಗ್ಗಿನಿಂದ ಮತಯಂತ್ರ ನಿಧಾನ ಗತಿಯಿಂದ ಮತಗಳನ್ನು ಗ್ರಹಿಸಿ ಕೊಳ್ಳುತ್ತಿತ್ತು. ಮೂರು ಬಾರಿ ಸ್ಟ್ರಕ್ ಆಗಿ ಮತ ಚಲಾವಣೆಯಲ್ಲಿ ತಡವಾಗಿಯಿತು. ಅದರಲ್ಲೂ ಬಿಜೆಪಿ ಅಭ್ಯರ್ಥಿಯ ಮತ ಚಲಾವಣೆಯಾಗಿ ಓಕೆಯಾಗಲು ಸಮಯವನ್ನು ತೆಗೆದುಕೊಳ್ಳುತ್ತಿತು ಎಂಬ ದೂರಿನ ಹಿನ್ನೆಲೆಯಲ್ಲಿ. 10.45ರ ಸುಮಾರಿಗೆ ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದೂ ಅಲ್ಲದೆ, ಮತದಾನ ಮುಂದೂಡಲು ಆಗ್ರಹಿಸಿದ್ದಾರೆ. ಇದನ್ನು ಕೇಳಿ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮತಯಂತ್ರವನ್ನು ಬದಲಾಯಿಸಿದರು. ಇದರಿಂದ ಸುಮಾರು 1 ತಾಸು ಮತದಾರರು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಉಂಟಾಯಿತು.
ಓಟು ಹಾಕಲು ಬಂದಳು ಮದುವಣಗಿತ್ತಿ: ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ವಿವಾಹವಾಗಿದ್ದ ನವ ವಧು ಬಿ.ಸಿ.ರೋಡಿನಲ್ಲಿ ಶನಿವಾರ ನಡೆಯಬೇಕಾಗಿದ್ದ ಅರತಕ್ಷತೆ ಮುನ್ನ ಬಂಟ್ವಾಳ ಎಸ್ ವಿ ಎಸ್ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಂಟ್ವಾಳ ಭಂಡಾರಿಬೆಟ್ಟುವಿನ ನವವಧು ಬೆಂಗಳೂರಿನಲ್ಲಿದ್ದು, ಕೆಲದಿನಗಳ ಹಿಂದೆ ದೆಹಲಿಯಲ್ಲಿ ವಿವಾಹ ಸಮಾರಂಭ ನಡೆದಿತ್ತು. ಬಿ.ಸಿ.ರೋಡಿನ ಮೊಡಂಕಾಪಿನಲ್ಲಿ ಸಭಾಂಗಣದಲ್ಲಿ ಚುನಾವಣೆಯಂದೆ ಅರತಕ್ಷತೆ ಆಯೋಜಿಸಿದ್ದು, ವಧು ಅರತಕ್ಷತೆಗಾಗಿ ಸಭಾಂಗಣಕ್ಕೆ ತೆರಳುವ ಹಾದಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಶತಾಯುಷಿಯಿಂದ ಹಕ್ಕುಚಲಾವಣೆ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಾಣಿ ಸಮೀಪದ ಪೆರಾಜೆ ಶಾಲೆಯಲ್ಲಿ ಪೆರಾಜೆ ಗ್ರಾಮದ ಬಡೆಕೋಡಿ ನಿವಾಸಿ 103 ಹರೆಯದ ಶತಾಯುಷಿ ಲಕ್ಷ್ಮೀಯವರು ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿ ಯುವಕರನ್ನು ನಾಚುವಂತೆ ಮಾಡಿದರು.
ಜನಾಕರ್ಷಣೆಯ ಮಾದರಿ ಮತಗಟ್ಟೆ: ಈ ಬಾರಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಮಾದರಿ ಮತಗಟ್ಟೆ ರಚನೆ ಮಾಡಲಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕೇಪು ಗ್ರಾಮದ ಕಲ್ಲಂಗಳ ಆಶ್ರಮ ಶಾಲೆಯ 91ನೇ ಮತಗಟ್ಟೆ ಮದುವಣಗಿತ್ತಿಯಂತೆ ಅಲಂಕಾರಗೊಂಡಿತ್ತು. ಬಣ್ಣಬಣ್ಣದ ವಸ್ತ್ರ, ನೆಲಕ್ಕೆ ಕೆಂಪು ಹಾಸು, ರಂಗುರಂಗಿನ ಬಲೂನುಗಳ ತೋರಣಗಳಿಂದ ಮತದಾರರನ್ನು ಸ್ವಾಗತಿಸುತ್ತಿತ್ತು. ಬಂದವರಿಗೆ ಬೆಲ್ಲ-ನೀರು, ಕುಳಿತುಕೊಳ್ಳಲು ಬಟ್ಟೆ ಹಾಸಿದ ಕುರ್ಚಿಗಳು ವಿಶೇಷತೆಯಾಗಿತ್ತು. ಈ ಮತಗಟ್ಟೆ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತ್ತು.
ಮಾತಿನ ಚಕಮಕಿ: ದೇಲಂತಬೆಟ್ಟು 241 ಮತಗಟ್ಟೆಯಲ್ಲಿ ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಬಂದು ಬಿಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಕೆಲವು ಮೂಲಗಳ ಪ್ರಕಾರ ಒಂದು ಪಕ್ಷದವರಿಗೆ ಮತಗಟ್ಟೆಯ ಬಳಿಗೆ ನೇರವಾಗಿ ಹೋಗಲು ಬಿಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಪೊಲೀಸ್ ಇಲಾಖೆಯ ಹಾಗೂ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ 100 ಮೀಟರ್ ದೂರದಲ್ಲಿ ಮಾರ್ಕ್ ಮಾಡಿ ಇದರ ಒಳಗೆ ಯಾವ ಪಕ್ಷದವರೂ ಬರದಂತೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವೀಕಾಂತೇ ಗೌಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೂ ದೌಡಾಯಿಸಿದರು.
ಉದ್ದವಾಗಿ ಬೆಳೆದ ಸಾಲು: ವಿಟ್ಲ ಪಡ್ನೂರು ಗ್ರಾಮದ ಕಡಂಬು ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ಬೆಳಗ್ಗೆ ಸ್ವಲ್ಪ ತೊಂದರೆ ಕಾಣಿಸಿಕೊಂಡ ಕಾರಣ ಮತದಾರರ ಸರದಿ ಸಾಲು ಉದ್ದವಾಗಿ ಬೆಳೆದಿತ್ತು. ಅಶಕ್ತರಿಗೆ ಮತ್ತು ಅಂಗ ವಿಕಲರಿಗಾಗಿ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದು ಹಂತದಲ್ಲಿ ಇವರ ಅರ್ಜಿ ಫಾರ್ಮ್ ಗಳೆಲ್ಲಾ ಖಾಲಿಯಾಗಿ ಬೇರೆ ಕಡೆಯಿಂದ ತರುವ ವ್ಯವಸ್ಥೆ ಮಾಡುವವರೆಗೆ ಸ್ವಲ್ಪ ಸಮಯ ಇವರು ಕೂಡ ಸರದಿಯಲ್ಲಿ ನಿಲ್ಲುವಂತಾಯಿತು.
ಅಳಿಕೆಯಲ್ಲಿ ಹೆಜ್ಜೇನು ದಾಳಿ: ಅಳಿಕೆ ಶ್ರೀಸತ್ಯಸಾಯಿ ವಿದ್ಯಾಸಂಸ್ಥೆಗೆ ತೆರಳುವ ಮುಖ್ಯದ್ವಾರದ ಬಳಿ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದ ಕಾರ್ಯಕರ್ತರಿಗೆ ಎರಡೆರಡು ಬಾರಿ ಹೆಜ್ಜೇನುಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸಿದೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೊದಲ ಬಾರಿ ದಾಳಿ ನಡೆಸಿದರೆ, ಸಂಜೆ 4 ಗಂಟೆಯ ಸುಮಾರಿಗೆ ಇನ್ನೊಂದು ಬಾರಿ ದಾಳಿ ನಡೆಸಿತ್ತು. ಈ ದಾಳಿಯಿಂದ ಹತ್ತಾರು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿಯ ಬಳಿಕ ಕಾರ್ಯಕರ್ತರೆಲ್ಲರೂ ಈ ಸ್ಥಳದಿಂದ ಸ್ಥಳಾಂತರಗೊಳಿಸಬೇಕಾಯಿತು. ಜೇನು ನೊಣ ಕಡಿತದಿಂದ ಹಲವು ಮತದಾರರಿಗೆ ಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ ಪ್ರಸಂಗ ನಡೆದಿದೆ. ಗುಲಾಬಿ ಬೀಮಾವರ, ಅಣ್ಣು ಪೂಜಾರಿ, ರವಿ ಪಡಿಬಾಗಿಲು, ತಿಮ್ಮಪ್ಪಯ್ಯ ಭಟ್ ಮಡಿಯಾಳ, ಅಣ್ಣು ಕುಲಾಲ್, ಬಾಲಕೃಷ್ಣ ಸುವರ್ಣ, ಫಲುಲ್ ಕುದ್ದುಪದವು ಮೊದಲಾದವರಿಗೆ ಜೇನ್ನೊಣ ದಾಳಿ ನಡೆಸಿ ಅಟ್ಟಾಡಿಸಿದೆ ಎಂದು ತಿಳಿದುಬಂದಿದೆ.
ಪ್ರಮುಖರಿಂದ ಮತದಾನ: ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರು ತಾಲೂಕಿನ ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆಯಲ್ಲಿ ಮತ ಚಲಾಯಿಸಿ ನಂತರ ಮಾತನಾಡಿ, ಇದು ತನ್ನ 8ನೇ ಸ್ಪರ್ಧೆಯಾಗಿದೆ. ಇಲ್ಲಿನ ಕ್ಷೇತ್ರದ ಮತದಾರರೇ ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈ ಬಾರಿ ಮತ್ತೆ ನನ್ನನ್ನು ಗೆಲ್ಲಿಸಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಮಂಗಳೂರು ಉತ್ತರದ ಗುರುಪುರದ ತೆಂಕೆಡಪದವು ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಮತಚಲಾಯಿಸುವ ಮೂಲಕ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಬಂಟ್ವಾಳ ಭಂಡಾರಿಬೆಟ್ಟು ಎಸ್ವಿಎಸ್ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿದರು.
ಮಾಜಿ ಶಾಸಕ ರುಕ್ಮಯಪೂಜಾರಿ ಬಾಳ್ತಿಲ ಗ್ರಾಮಪಂಚಾಯತ್ ಕಛೇರಿ ಹಾಗೂ ಮಾಜಿ ಶಾಸಕಪದ್ಮನಾಭ ಕೊಟ್ಟಾರಿಯವರು ಗೋಳ್ತಮಜಲು ಗ್ರಾ.ಪಂ. ಕಛೇರಿಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

