ಕುಪ್ಪೆಪದವು : ಮಂಗಳೂರು ಉತ್ತರ ಕ್ಷೇತ್ರ ಉದ್ಯಮಿಗಳ ಕಪಿಮುಷ್ಠಿಯಲ್ಲಿದೆ. ಎಂಆರ್‍ಪಿಎಲ್ ಹಾಗೂ ಸೆಝ್‍ನಂತಹ ಕಂಪೆನಿಗಳಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿನ ಶಾಸಕ, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೋಮುಗಲಭೆ ಸೃಷ್ಟಿಸಿ, ಈ ಕ್ಷೇತ್ರದಲ್ಲಿ ಯುವಕರ ಬಲಿ ಕೊಡಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಆರೋಪಿಸಿದರು.gur-may-7-munir katipalla

ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಯಂತೆ ನಾನು ಕೋಟ್ಯಾಧಿಪತಿಯಲ್ಲ. ಜನಸಾಮಾನ್ಯನಾದ ನಾನು ಈವರೆಗೂ ಬಡವರು, ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದೇನೆ. ಇದು ಮುಂದುವರಿಯುತ್ತದೆ ಎಂದು ಕುಪ್ಪೆಪದವಿನಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮುನೀರ್ ಅಭಿಪ್ರಾಯಪಟ್ಟರು.
ಕಾಂಕ್ರೀಟು ರಸ್ತೆ, ಮಾಲುಗಳ ನಿರ್ಮಿಸಿದ ಮಾತ್ರಕ್ಕೆ ಕ್ಷೇತ್ರದ ಅಭಿವೃದ್ಧಿಯಾಗುವುದಿಲ್ಲ. ಬಡಜನತೆ ಮತ್ತು ಕಂಪೆನಿಗಳಿಂದ ತುಳಿತಕ್ಕೊಳಗಾದ ಕಾರ್ಮಿಕ ವರ್ಗದ ಏಳ್ಗೆಗೆ ಈ ರಾಜಕಾರಣಿಗಳು ಏನಾದರೂ ಮಾಡಿದ್ದಾರೆಯೇ ? ಬೀಡಿ ಮುಚ್ಚಿಸಲು ಮುಂದಾಗಿರುವ ಸರ್ಕಾರಗಳು ಮಹಿಳೆಯರಿಗೆ ಪರ್ಯಾಯ ಕೆಲಸದ ಬಗ್ಗೆ ಆಲೋಚಿಸಿದೆಯೇ ಎಂದವರು ಸವಾಲೆಸೆದರು.

ಕೆಲವು ಪಕ್ಷಗಳು ಈಗ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಇದನ್ನೆಲ್ಲ ಕಂಡಾಗ ಇವರ ಉದ್ದೇಶ ಏನೆಂಬುದು ಸಾಮಾನ್ಯರಿಗೆ ಗೊತ್ತಾಗುತ್ತದೆ. ಬದಲಾವಣೆಗಾಗಿ ಸಿಪಿಐಎಂಗೆ ಮತ ನೀಡಿ ಎಂದವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಯು ಬಿ ಲೋಕಯ್ಯ, ಬಿ ಕೆ ಇಮ್ತಿಯಾಝ್, ಭಾಸ್ಕರ್ ಆಚಾರಿ ಕುಪ್ಪೆಪದವು, ಸದಾಶಿವದಾಸ್, ವಸಂತಿ ಕುಪ್ಪೆಪದವು, ಎನ್ ಎ ಹಸನಬ್ಬ ಮೊದಲಾದವರಿದ್ದರು. ಸಭೆಗೆ ಮುಂಚೆ ಕುಪ್ಪೆಪದವಿನಲ್ಲಿ ರೋಡ್ ಶೋ ನಡೆಸಿದ ಮುನೀರ್ ಕಾಟಿಪಳ್ಳ ಮತ್ತು ಬೆಂಬಲಿಗರು ಅಂಗಡಿಗಳು ಮತ್ತು ಮನೆಮನೆಯಲ್ಲಿ ಮತ ಯಾಚಿಸಿದರು.

By suddi9

Leave a Reply

Your email address will not be published. Required fields are marked *