ಉನ್ನಾವೋ: ಈಗಾಗಲೇ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಿಂದಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಉನ್ನಾವೋ ನಲ್ಲಿ ಅಂಥದೇ ಮತ್ತೊಂದು ಘಟನೆ ನಡೆದಿದೆ.
ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಲ್ಲದೆ, ಈ ಕುಕೃತ್ಯವನ್ನು ವಿಡಿಯೋ ಮಾಡಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಷಯವೂ ಬಯಲಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಕಳೆದ ವರ್ಷ ಜೂನ್ ನಲ್ಲಿ ಉನ್ನಾವೋನಿಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ. ಈ ಘಟನೆ ದೇಶದಾದ್ಯಂತ ಸದ್ದು ಮಾಡಿದ ಕಾರಣ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತಕ್ಷಣವೇ ಪ್ರಕರಣವನ್ನು ಸಿಬಿಐ ಗೆ ವಹಿಸಿತ್ತು.
ಕಾಶ್ಮೀರದ ಕತುವಾ ಪ್ರದೇಶದಲ್ಲೂ ಎಂಟು ವರ್ಷದ ಅಪ್ರಾಪ್ತೆಯ ಮೇಲೆ ಹಲವು ದಿನಗಳ ಕಾಲ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ದೇಶದಾದ್ಯಂತ ತಲ್ಲಣ ಎಬ್ಬಿಸಿತ್ತು.

