ಕುಂದಾಪುರ: ಇಲ್ಲಿನ ಪ್ರಸಿದ್ದ ಹೊಟೇಲ್ ಒಂದಕ್ಕೆ ತಪಾಸಣೆಗೆ ತೆರಳಿದ್ದ ತಾಲೂಕು ಚುನಾವಣಾಧಿಕಾರಿ ಸಹಾಯಕ ಕಮಿಷನರ್ ಭೂಬಾಲನ್ ಅವರ ಮೇಲೆ ಹಲ್ಲೆ ಯತ್ನ ನಡೆಸಿರುವ ಘಟನೆ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ ಭೂಬಾಲನ್ ಕುಂದಾಪುರ್ ಪೊಲೀಸ್ ಠಾಣೆಯಲ್ಲಿ ನಾಲ್ವರ ಮೇಲೆ ದೂರು ದಾಖಲಿಸಿದ್ದಾರೆ. ಸೆಕ್ಷನ್ 332, 339, 353 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುರೇಂದ್ರ ಶೆಟ್ಟಿ ಹಾಗೂ ಪ್ರಶಾಂತ ಆಚಾರ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತಾಲೂಕು ಚುನಾವಣಾಧಿಕಾರಿ ಸಹಾಯಕ ಕಮಿಷನರ್ ಹಾಗೂ ಪ್ರೊಬೇಶನರಿ ಸಹಾಯಕ ಕಮಿಷನರ್ ಪೂವಿತಾ, ಮೂವರು ಸಿಬ್ಬಂದಿಗಳು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೋಟೇಶ್ವರ ಸಮೀಪದ ಅಂದಕಟ್ಟೆಯ ಸಹನಾ ಆರ್ಕಿಡ್ ಹೊಟೇಲ್ಗೆ ತಪಾಸಣೆಗೆ ತೆರಳಿದ ವೇಳೆ ಈ ಘಟನೆ ನಡೆದಿದೆ. ತಪಾಸಣೆಯ ವೇಳೆ ಚಿತ್ರೀಕರಣ ಮಾಡುತ್ತಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ ಗಿರಾಕಿಗಳು ಏಕಾಏಕಿಯಾಗಿ ಅಧಿಕಾರಿಗಳನ್ನು ಸುತ್ತುವರೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಹಿಂದಿನಿಂದ ಎಸಿ ಭೂಬಾಲನ್ ಅವರನ್ನು ತಳ್ಳಿದ್ದಾರೆ.
ಘಟನೆಯ ವೇಳೆ 40 ರಿಂದ 50ಕ್ಕೂ ಹೆಚ್ಚು ಮಂದಿ ಸುತ್ತುವರಿದಿದ್ದರು. ಹೊಟೇಲ್ ಸಿಬ್ಬಂದಿಗಳು ಸ್ಥಳದಲ್ಲಿದ್ದರೂ ಕೂಡ ನಮ್ಮ ರಕ್ಷಣೆಗೆ ಮುಂದಾಗಲಿಲ್ಲ. ಹೋಟೆಲ್ ಗೆ ಸಂಬಂಧಿಸಿದ ವ್ಯಕ್ತಿಯೋರ್ವರು ನಮ್ಮನ್ನೇ ಪ್ರಶ್ನಿಸಿದ್ದಾರೆ. ನಾವು ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದ್ದೇವೆ ಸಹಕರಿಸಿ ಎಂದರೂ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಎಂದು ಎಸಿ ಭೂಬಾಲನ್ ಆರೋಪಿಸಿದ್ದಾರೆ.
ಬಳಿಕ ಅಧಿಕಾರಿಗಳು ಗನ್ ಮ್ಯಾನ್ ಸಹಾಯದಿಂದ ಹೊಟೇಲ್ ಹೊರಗಡೆ ಬಂದು ಪೊಲೀಸರಿಗೆ ಕರೆ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆಂದು ಭೂಬಾಲನ್ ತಿಳಿಸಿದ್ದಾರೆ.
