ಕಾರ್ಕಳ : ತೌಳವ ಇಂದ್ರ ಸಮಾಜದ ‘ಆಟಿ ಡೊನ್ಜಿ ವಿಹಾರ ಕೂಟ’ ವಿನೂತನ ಕಾರ್ಯಕ್ರಮ

ಬಸದಿಗೆ ಬನ್ನಿ ಕಾರ್ಯಕ್ರಮದಿಂದ ಪ್ರೇರಿತರಾಗಿ ರೂಪಿಸಲಾದ ಈ ತೌಳವ ಇಂದ್ರ ಸಮಾಜದ “ಆಟಿ ಡೊನ್ಜಿ ವಿಹಾರ ಕೂಟ” ವಿನೂತನವಾದ ಕಾರ್ಯಕ್ರಮವು ಕಾರ್ಕಳ ಶಿರ್ಲಾಲಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಸೂಡಿ ಬಸದಿ ಪರಿಸರದಲ್ಲಿ ನಡೆಯಿತು. ಬಸದಿಯ ಶ್ರೀ ಆದಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಪೂಜೆಯನ್ನು ಶ್ರೀನಯನ ಇಂದ್ರರು ನೆರವೇರಿಸಿದ ಬಳಿಕ ಬಸದಿಯ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಯುತ ಗುಣಪಾಲ ಕಡಂಬ ಇಂದಿಲ್ಲಿರವರು, ಸೂಡಿ ಬಸದಿ ಸಂದರ್ಶಿಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸುವ ಪ್ರಯತ್ನ ಇದಾಗಿದ್ದು ಹಳ್ಳಿ ಪ್ರದೇಶದಲ್ಲಿರುವ ಬಸದಿಗಳನ್ನು ಸಂದರ್ಶಿಸಿ ಸ್ಥಳೀಯರೊಡನೆ ಒಂದುದಿನ ಕಳೆದು ಸಂಪರ್ಕ ಕೊಂಡಿಯನ್ನು ಹೆಚ್ಚಿಸಿಕೊಳ್ಳುವುದು ಒಂದು ಒಳ್ಳೆಯ ಕಾರ್ಯಕ್ರಮ ಅಲ್ಲದೆ ಸ್ಥಳೀಯ ಆಡಳಿತ ಮಂಡಳಿಯವರ ಕಾರ್ಯಕ್ಕೆ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಂತೆಯೂ ಆಗುತ್ತದೆ” ಎಂದರು.
ಸೂಡಿ ಬಸದಿ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಯುತ ಸೂರಜ್ ಜೈನ್ ರವರು ಮಾತನಾಡಿ, ತೌಳವ ಇಂದ್ರ ಸಮಾಜದ ವಿನೂತನ ವಿಶಿಷ್ಟ ಶೈಲಿಯ ಕಾರ್ಯಕ್ರಮವನ್ನು ಶ್ಲಾಘಿಸಿದರು. ತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಶ್ರೀಯುತ ಜ್ಞಾನಚಂದ್ರ ಇಂದ್ರರು ಪ್ರಾಸ್ತಾವಿಕ ಮಾತು ಆಡಿ, ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಯುತ ಅರ್ಕಕೀರ್ತಿ ಇಂದ್ರ ಉಪಸ್ಥಿತರಿದ್ದರು.
ಈ ವೇಳೆಯಲ್ಲಿ ಸದಸ್ಯರಿಗೆ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಕುಮಾರಿ ಮೇಘನಾ ಪ್ರಾರ್ಥನೆ ನೆರವೇರಿಸಿ, ತೌಳವ ಇಂದ್ರಸಮಾಜದ ಉಪಾಧ್ಯಕ್ಷರಾದ ಶ್ರೀಯುತ ಅಕ್ಷಯ ಕುಮಾರ್ ಮಳಲಿ ಯವರು ಕಾರ್ಯಕ್ರಮ ಸಂಯೋಜಿಸಿ, ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಯುತ ಅಭಯಕುಮಾರ್ ಬಿ. ಧನ್ಯವಾದ ಅರ್ಪಿಸಿದರು. ಮಧ್ಯಾಹ್ನ ಸಾಂಪ್ರದಾಯಿಕ ತಿಂಡಿಗಳೊಂದಿಗೆ ಊಟದ ವ್ಯವಸ್ಥೆಯೂ ಇತ್ತು. ಕಾರ್ಯಕ್ರಮದ ಅಂಗವಾಗಿ ವಿಹಾರ ನಿರ್ಮಾಣ ಹಂತದಲ್ಲಿರುವ ಮೂಡಾರು ಬಸದಿ ಹಾಗೂ ಸಮೀಪ ವಿರುವ ಜಲಪಾತ ವೀಕ್ಷಣೆಯನ್ನು ಮಾಡಲಾಯಿತು.