ಸುಳ್ಯ: ಅಖಂಡ ಭಾರತದ ಅಸ್ಮಿತೆ ಉಳಿಯಬೇಕಾದರೆ ಬಿಜೆಪಿ ಗೆಲ್ಲಬೇಕು. ಬಿಜೆಪಿಯ ಮೂಲಬೇರು ಸುಳ್ಯದಲ್ಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಆತ್ಮವಿದ್ದಂತೆ ಎಂದು ಬಿಜೆಪಿ ರಾಜ್ಯ ಸಮಿತಿಯ ವಕ್ತಾರೆ ಹಾಗೂ ಮಾಜಿ ಸಂಸದೆ ಡಾ. ತೇಜಸ್ವಿನಿ ರಮೇಶ್ ಬಣ್ಣಿಸಿದ್ದಾರೆ.
ಬಿಜೆಪಿ ಸುಳ್ಯ ಮಂಡಲ, ಕಡಬ ಮಹಾ ಶಕ್ತಿಕೇಂದ್ರ ಹಾಗೂ ಬಿಳಿನೆಲೆ ಶಕ್ತಿಕೇಂದ್ರದ ಸಂಯುಕ್ತಾಶ್ರಯದಲ್ಲಿ ಜರಗಿದ ಭಾರತಮಾತಾ ಪೂಜನ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬಿಜೆಪಿಯ ರಾಷ್ಟ್ರೀಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿಯಂತಹವರು ಸುಳ್ಯ ಹೆಸರನ್ನು ಉಲ್ಲೇಖಿಸಬೇಕಾದರೆ ಸುಳ್ಯದ ಬಿಜೆಪಿ ಕಾರ್ಯಕರ್ತರ ಬಗ್ಗೆ ನಾವು ಹೆಮ್ಮೆಪಡಲೇಬೇಕು. ಅಂಗಾರರಂತಹ ಅತ್ಯಂತ ಸಜ್ಜನ ಶಾಸಕರನ್ನು ಕೊಟ್ಟ ಸುಳ್ಯದಲ್ಲಿ ಬಿಜೆಪಿಯ ನಂದಾದೀಪ ಇನ್ನಷ್ಟು ಪ್ರಜ್ವಲಿಸಬೇಕು ಎಂದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರುವಾಗ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಬೇಕು. ಆಗ ಮಾತ್ರ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ ಎಂದ ಅವರು ದೇಶದ ಅಭ್ಯುದಯಕ್ಕಾಗಿ ಪ್ರಧಾನಿ ನರೇಂದ್ರಮೋದಿಯವರು ನಡೆಸುತ್ತಿರುವ ಮಹಾಯಜ್ಞದಲ್ಲಿ ನಾವು ಕೂಡ ಪಾಲ್ಗೊಳ್ಳೋಣ. ಅದಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವುವನ್ನು ತಂದುಕೊಡುವಲ್ಲಿ ನಾವೆಲ್ಲರೂ ಕಟಿಬದ್ಧರಾಗೋಣ ಎಂದು ಕರೆ ನೀಡಿದರು.
