ಕುಡುಪು(ಗುರುಪುರ): ಯಾವುದೇ ಕುಂದುಕೊರತೆಗಳಿಲ್ಲದೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆದಿದ್ದು, ಇದಕ್ಕೆ ಸರ್ವ ರೀತಿಯಲ್ಲೂ ಕಾರಣೀಭೂತವಾಗಿರುವ ಸಮಿತಿ, ಉಪ-ಸಮಿತಿ, ಊರ-ಪರವೂರ ಭಕ್ತಜನರು, ವೈದಿಕ-ಅರ್ಚಕ ವೃಂದದ ಅದ್ಭುತ ಸಹಕಾರ ಕಾರಣ ಎಂದು ಕುಡುಪು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ. ಕೃಷ್ಣರಾಜ ತಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ದೇವರ ಕೆಲಸವಾಗಿದ್ದು, ಎಲ್ಲ ಸಮಿತಿ, ಉಪ-ಸಮಿತಿಗಳು ಹಗಲು-ರಾತ್ರಿಯೆನ್ನದೆ ಎಂಟು ದಿನ ನಿರಂತರ ಕೆಲಸ ಮಾಡಿವೆ. ಬ್ರಹ್ಮಕಲಶೋತ್ಸವಕ್ಕೆ ಊಹೆಗೂ ಮೀರಿದ ಹಸಿರು ಹೊರೆಕಾಣಿಕೆ, ಕಾಣಿಕೆಯ ಹೊಳೆಯೇ ಹರಿದು ಬಂದಿದೆ. ದೇವರ ದಯೆಯಿಂದ ಅದ್ಭುತ ವ್ಯವಸ್ಥೆಯಾಗಿದೆ. ಮಾತಿನಲ್ಲಿ ವಿವರಿಸಲು ಅಸಾಧ್ಯವಾದ ಯಶಸ್ಸಿನೊಂದಿಗೆ ಕುಡುಪು ಕ್ಷೇತ್ರದ ಬ್ರಹ್ಮಕಲಕಶೋತ್ಸವ ಸಂಪನ್ನಗೊಂಡಿದೆ ಎಂದರು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನರಸಿಂಹ ತಂತ್ರಿ ಮಾತನಾಡಿ, ಎಲ್ಲರ ಸಹಕಾರದಿಂದ ದೇವರು ಈ ಕೆಲಸ ಮಾಡಿಸಿದ್ದಾನೆ. ದೇವರ ಅನುಗ್ರಹವಿಲ್ಲದೆ ಏನೂ ನಡೆಯದು. ಬ್ರಹ್ಮಕಲಶೋತ್ಸವದ ಶ್ರೇಯ ಭಕ್ತಜನರಿಗೆ ಸಲ್ಲಬೇಕು ಎಂದು ತಿಳಿಸಿದರು.
ಆಡಳಿತ ಮೊಕ್ತೇಸರ ಹಾಗೂ ಮಂಗಳೂರು ನಗರ ಪಾಲಿಕೆ ಮೇಯರ್ ಆಗಿರುವ ಭಾಸ್ಕರ.ಕೆ. ಮಾತನಾಡಿ, ಅತಿ ವಿಜೃಂಭಣೆಯಿಂದ ನಡೆದಿರುವ ಬ್ರಹ್ಮಕಲಶೋತ್ಸವ ಶಿಸ್ತು ಮತ್ತು ಸಂಯಮಕ್ಕೆ ಮಾದರಿಯಾಗಿದೆ. ಶ್ರದ್ಧೆಯಿಂದ ಒಂದು ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಈ ಕೆಲಸವೇ ಸಾಕ್ಷ್ಯಿ. ಇದು ಪರವೂರ ಮಹನೀಯರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ವೈಯಕ್ತಿಕವಾಗಿ ನನ್ನ ಮೇಲೂ ದೇವರು ದಯೆ ಬೀರಿದ್ದಾರೆ ಎಂದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುದರ್ಶನ ಕುಡುಪು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ರೈ, ಆಡಳಿತ ಮೊಕ್ತೇಸರ ಮನೋಹರ ಭಟ್, ಬಾಲಕೃಷ್ಣ ಕಾರಂತ, ರವೀಂದ್ರ ನಾಯಕ್, ಸುಜನ್‍ದಾಸ್ ಕುಡುಪು ಇದ್ದರು. ಬ್ರಹ್ಮಕಲಶೋತ್ಸವ ಸಂಘಟನಾ ಕಾರ್ಯದರ್ಶಿ ವಾಸುದೇವ ರಾವ್ ಕುಡುಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



