ಮಂಗಳೂರು: ಏ.6 ರಂದು ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಮನೆ ಮನ ಕಮಲ ಅಭಿಯಾನ ನಡೆಯಲಿದೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಆವರಿಸಿರುವ ಕಾರ್ಮೋಡವನ್ನು ಸರಿಸಿ ಬಿಜೆಪಿಯ ಬೆಳ್ಳಿ ಮೋಡವು ಆವರಿಸುವಂತೆ ಮಾಡಿ ಕನ್ನಡ ನಾಡನ್ನು ಸರ್ವ ಶಾಂತಿಯ ತೋಟವನ್ನಾಗಿ ಮಾಡಲು ಮಹಿಳಾ ಕಾರ್ಯಕರ್ತರು ಸಜ್ಜಾಗಿದ್ದಾರೆ. ಏ.6 ರಂದು ಪ್ರತಿ ಬೂತ್ ಗಳಲ್ಲಿನ ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಾರೆ ಎಂದರು.
ಮಹಿಳಾ ದೌಜನ್ಯ ಮಹಿಳಾ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಮಹಿಳೆಯ ಸ್ವಾವಲಂಬಿ ಬದುಕಿಗೆ ಬಿಜೆಪಿಯ ಕೊಡುಗೆಯನ್ನು ಮನದಟ್ಟು ಮಾಡಲಿದ್ದಾರೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ವಿರೋಧಿ ಕೃತ್ಯಗಳು, ಧರ್ಮ ಧರ್ಮಗಳನ್ನು ಒಡೆಯುವಂತ ಹುನ್ನಾರ, ಓಟ್ ಬ್ಯಾಂಕಿನ ರಾಜಕಾರಣ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿರುವ ಎಲ್ಲಾ ಪ್ರಸಂಗವನ್ನು ಮುಂದಿಟ್ಟು ಜನರ ಮನವನ್ನು ಮುಟುವ ಕೆಲಸ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರಿಂದ ಮನೆಮನೆ ಗೆ ತೆರಳಿ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಭಾಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.

