ಬೆಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವೇಳೆ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೂ ಸರಿಯಾದ ಆದ್ಯತೆಯನ್ನು ನೀಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರಮ್ ನಲ್ಲಿ ನಡೆದ ಬ್ರಾಹ್ಮಣ ಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಯಾರಿಗೆ ಎಲ್ಲೆಲ್ಲಿ ಟಿಕೆಟ್ ನೀಡಬೇಕೆನ್ನುವುದನ್ನು ರಾಜಕೀಯ ಪಕ್ಷಗಳೇ ತೀರ್ಮಾನಿಸಬೇಕು. ಇದನ್ನು ನಾನು ಹೇಳುವುದು ಸರಿಯಲ್ಲ. ನನಗೆ ಎಲ್ಲರೂ ಬೇಕಾದವರೆ. ಜಾತಿವಾರು ಕೊಡಿ ಎಂದು ನಾನು ಹೇಳುವುದಿಲ್ಲ. ಒಂದು ಕಡೆ ಬ್ರಾಹ್ಮಣರಿದ್ದರೆ, ಇನ್ನು ಕೆಲವು ಕಡೆ ಬೇರೆ ಜಾತಿಯವರಿರುತ್ತಾರೆ. ಆದರೆ, ರಾಜಕೀಯ ಪ್ರಾತಿನಿಧ್ಯದಲ್ಲಿ ಬ್ರಾಹ್ಮಣರಿಗೂ ಅನ್ಯಾಯವಾಗಬಾರದು, ಉಳಿದವರಿಗೂ ಅನ್ಯಾಯವಾಗಬಾರದು ಎಂದು ಅಭಿಪ್ರಾಯಪಟ್ಟರು.
‘ಲಿಂಗಾಯತ–ವೀರಶೈವ ಬೇರ್ಪಡಿಸಬೇಡಿ’ ಇವೆರಡೂ ಒಂದೇ. ಶಿವನ ಆರಾಧಕರೆಲ್ಲರೂ ಹಿಂದೂಗಳೇ. ಇವರು ಹಿಂದೂ ಧರ್ಮದಿಂದ ಬೇರೆಯಾಗಬಾರದು ಎಂದವರು, ಯಾರಿಗೆ ಮತ ನೀಡಬೇಕು ಎನ್ನುವುದನ್ನು ಬ್ರಾಹ್ಮಣರೆಲ್ಲರೂ ಒಗ್ಗಟ್ಟಿನಿಂದ ತೀರ್ಮಾನಿಸಬೇಕು. ನಾನು ಯಾವುದೇ ವ್ಯಕ್ತಿ ಮತ್ತು ಪಕ್ಷದ ಹೆಸರು ಸೂಚಿಸುವುದಿಲ್ಲ. ಯೋಗ್ಯ ವ್ಯಕ್ತಿಯನ್ನು ನೀವೇ ನಿರ್ಧರಿಸಿ, ಅವರಿಗೆ ಮತ ನೀಡಿ ಎಂದು ಸಲಹೆ ನೀಡಿದರು.
ಬ್ರಾಹ್ಮಣರು ಮತ್ತು ಉಳಿದವರ ನಡುವೆ ದ್ವೇಷ, ವಿರೋಧ ಬೆಳೆದರೆ ಅದಕ್ಕೆ ಬ್ರಾಹ್ಮಣರೇ ನೇರ ಕಾರಣವೆಂದು ಕೆಲವು ಬುದ್ಧಿಜೀವಿಗಳು ಆರೋಪಿಸುತ್ತಿದ್ದಾರೆ. ಆದರೆ, ನಿಜವಾಗಿಯೂ ಸಮಗ್ರ ಸಮಾಜದ ಕಲ್ಯಾಣಕ್ಕೆ ಬ್ರಾಹ್ಮಣರೇ ಹೋರಾಟ ಮಾಡಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೂ ಕೆಲಸ ಮಾಡಿದ್ದಾರೆ. ಅವರು ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸಾಮಾನ್ಯ ಜನರಿಗೂ ಅವರ ಮೇಲೆ ದ್ವೇಷವಿಲ್ಲ. ಆದರೆ, ಕೆಲವರು ಬೇಕೆಂದೇ ದ್ವೇಷ ಹುಟ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

