ತುಮಕೂರು: ರಾಜ್ಯ ಚುನಾವಣಾ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶತಾಯುಷಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ರಾಹುಲ್ ಅವರನ್ನು ಆಶೀರ್ವದಿಸಿದ ಶ್ರೀಗಳು , ಅಜ್ಜಿ ಇಂದಿರಾಗಾಂಧಿ ಕೂಡ ಮಠಕ್ಕೆ ಭೇಟಿ ಕೊಟ್ಟಿದ್ದನ್ನು ನೆನಪಿಸಿಕೊಂಡರು.
ಇಂದಿರಾಗಾಂಧಿಯವರು ಮಠಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿನ ಫೋಟೋವೊಂದನ್ನು ಸ್ವಾಮೀಜಿ ರಾಹುಲ್ ಗೆ ತೋರಿಸಿದಾಗ ರಾಹುಲ್ ಭಾವುಕರಾದರು.
ನೀವು ಮಠಕ್ಕೆ ಬಂದಿದ್ದು ಸಂತೋಷ ತಂದಿದೆ ಎಂದು ಸ್ವಾಮೀಜಿ ಹೇಳಿದರೆ, ತಮ್ಮ ಆಶೀರ್ವಾದ ಸಿಕ್ಕಿದ್ದು ನನಗೂ ಆನಂದವಾಗಿದೆ ಎಂದು ರಾಹುಲ್ ಹೇಳಿದರು.
ನಂತರ ರಾಹುಲ್ ಶ್ರೀಮಠದಲ್ಲಿಯೇ ಪಾಯಸ, ಪಲ್ಯ ಮತ್ತು ಹಣ್ಣು ಸೇವಿಸಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್, ತುಮಕೂರು ಸಂಸದ ಮುದ್ದಹನುಮೇಗೌಡ, ಸಚಿವ ಟಿ.ಬಿ. ಜಯಚಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.

