ಬೆಂಗಳೂರು: ಇತ್ತಿಚೀಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿರನ್ನು ಭೇಟಿಯಾಗಿದ್ದ ನಟ ಸುದೀಪ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲಿ ನಟ ಸುದೀಪ್ ಅವರ ಈ ನಡೆ ಭಾರೀ ಕುತೂಹಲ ಮೂಡಿಸಿದ್ದು, ಸಿಎಂ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ಅಥವಾ ಪ್ರಚಾರ ಸಂಬಂಧ ಮಾತುಕತೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ ಪಕ್ಷದ ಪರ ಪ್ರಚಾರ ಸಂಬಂಧ ಸಿಎಂ ಈ ಸಂದರ್ಭ ಪ್ರಸ್ತಾಪಿಸಿದ್ದು, ಸುದೀಪ್ ಅದಕ್ಕೆ ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.
ಇತ್ತಿಚೀಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ತಲೆದೋರಿದ್ದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀಪ್ಗೆ ಎಚ್ಡಿಕೆ ವಿವರಿಸಿದ್ದಾರೆಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರು ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುತ್ತಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಆದರೆ ಈ ವಿಷಯವನ್ನು ಕುಮಾರಸ್ವಾಮಿ ಅವರಾಗಲಿ, ಇತ್ತ ಸುದೀಪ್ ಅವರಾಗಲಿ ಖಚಿತಪಡಿಸುತ್ತಿಲ್ಲ.
ಇದೀಗ ಸಿಎಂ ಜತೆ ಕೂಡ ಸುದೀಪ್ ಚರ್ಚಿಸಿದ್ದಾರೆ. ದಿಢೀರ್ ನಡೆದ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ್ದು, ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ.



