ಕುಪ್ಪೆಪದವು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಈ ಸರಕಾರವನ್ನು ಕಿತ್ತೊಗೆಯಬೇಕು ಎಂದು ಮಾಜಿ ಶಾಸಕ ಕೃಷ್ಣ.ಜೆ. ಪಾಲೆಮಾರ್ ಕಿಡಿಕಾರಿದ್ದಾರೆ.
ಸಮರ್ಪಕವಾಗಿ ನೀರು ಸರಬರಾಜಿಗೆ ಆಗ್ರಹಿಸಿ ಅಚಾರಿ ಜೋರ, ದೊಡ್ಡಳಿಕೆ ಹಾಗೂ ಎರ್ಮಾಳು ಪ್ರದೇಶದ ನಾಗರಿಕರು ಇಲ್ಲಿನ ಗ್ರಾ.ಪಂ. ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ಅಧಿಕಾರವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸುಮಾರು 16 ಕೋ.ರೂ. ವೆಚ್ಚದಲ್ಲಿ ಇಲ್ಲಿನ 9 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತಾದರು ಬಳಿಕ ಬಂದ ಕಾಂಗ್ರೆಸ್ ಸರಕಾರ ಈ ಯೋಜನೆಯನ್ನು ಮುಂದುವರಿಸದೆ ದ್ವೇಷ ಕಾರಕಾರಣ ಮಾಡಿದ್ದರಿಂದ ಇಂತಂಹ ಸಮಸ್ಯೆ ಉದ್ಭವಿಸುತ್ತಿದೆ ಎಂದು ಆರೋಪಿಸಿದರು.
ನೀರಿನ ಸಮಸ್ಯೆ ಬಗೆಹರಿಸುವಂತೆ ಇಲ್ಲಿನ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿದ ಪರಿಣಾಮ ಎಚ್ಚೆತ್ತ ಗ್ರಾ.ಪಂ. ಅಧಿಕಾರಿಗಳು ಕೃತಕ ಪರಿಹಾರಕ್ಕೆ ಮುಂದಾಗಿ ಗಿಮಿಕ್ ರಾಜಕೀಯ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೇರಿದ ಬಳಿಕ ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ಜಗದೀಶ್ ಕುಲಾಲ್ ಪಾಕಜೆ, ಆನಂದ ಪೂಜಾರಿ, ವಿಶ್ವನಾಥ ಹಾಗೂ ನಿತೇಶ್ ಮತ್ತಿತರರು ಉಪಸ್ಥಿತರಿದ್ದರು.

