ಸಿಂಗಾಪುರ: 164 ವರ್ಷದ ಹಿಂದು ದೇವಾಲಯ ಜೀರ್ಣೋದ್ಧಾರ
ಸಿಂಗಾಪುರ: 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ನಂತರ ವಿಶ್ವದೆಲ್ಲೆಡೆ ಹಿಂದೂ ದೇವಾಲಯಗಳಿಗೆ ವಿಶೇಷವಾಗಿ ಭಾರತಿಯರಿಗೆ ವಿಶೇಷ ಮನ್ನಣೆ ದೊರೆಯುತ್ತಿದ್ದು, ಇದೀಗ ಸಿಂಗಾಪುರದಲ್ಲಿ 164 ವರ್ಷಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಅಲ್ಲಿನ ಸರ್ಕಾರವೇ ನಿರ್ಧರಿಸಿದೆ.
ಸಿಂಗಾಪುರದಲ್ಲಿನ ಶ್ರೀ ಶ್ರೀನಿವಾಸ ಪೆರುಮಾಳ್ ದೇಗುಲವನ್ನು ಅಲ್ಲಿನ ಸರ್ಕಾರ ರಾಷ್ಟ್ರೀಯ ಸ್ಮಾರಕವೆಂದು ಗುರುತಿಸಿದ್ದು, 20 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುತ್ತಿದೆ. ಭಾರತದ 19 ನುರಿತ ಕುಶಲಕರ್ಮಿಗಳು ಒಂದು ವರ್ಷದಿಂದ ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಿತ್ಯದ ಪೂಜೆ ಮತ್ತು ಉತ್ಸವಗಳಿಗೆ ಧಕ್ಕೆಯಾಗದಂತೆ ದೇಗುಲದ ಜೀರ್ಣೋದ್ಧಾರ ನಡೆಸಲಾಗುತ್ತಿದೆ. ದೇಗುಲದಲ್ಲಿರುವ ವರ್ಣಚಿತ್ರಗಳಿಗೆ ಬಣ್ಣ ತುಂಬಿಸುವುದು, ವಿಮಾನ ಗೋಪುರ, ಕಂಬಗಳು ಮತ್ತು ದೇಗುಲದ ಚಾವಣಿ ದುರಸ್ತಿಗೊಳಿಸುವ ಕೆಲಸ ಮಾಡಲಾಗುತ್ತಿದೆ. ಏ. 22 ಕ್ಕೆ ದೇಗುಲದ ಜೀರ್ಣೋದ್ಧಾರ ಕಾರ್ಯ ಪೂರ್ಣವಾಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಸದಸ್ಯ ವೆಲ್ಲಯಪ್ಪನ್ ತಿಳಿಸಿದ್ದಾರೆ.
ದೇಗುಲವನ್ನು ಸಿಂಗಾಪುರ ಸರ್ಕಾರ 1978ರಲ್ಲಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿತ್ತು. ನಂತರ 1979, 1992 ಮತ್ತು 2005ರಲ್ಲಿ ದೇಗುಲ ಜೀರ್ಣೋದ್ಧಾರ ಮಾಡಲಾಗಿತ್ತು.