ಗುರುಪುರ-ಕೈಕಂಬ: ಇಲ್ಲಿನ ಶೋಷಿತ –ದಮನಿತರ ಪರವಾಗಿ ಧ್ವನಿ ಎತ್ತಲು ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಜನಸಾಮಾನ್ಯರ ಹಕ್ಕುಗಳಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭೆ ಅಭ್ಯರ್ಥಿಯಾಗಿ ಮುನೀರ್ ಕಾಟಿಪಳ್ಳ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಹಾಗೂ ಗುರುಪುರ ವಲಯ ಸಿಪಿಎಂ ವತಿಯಿಂದ ಇಲ್ಲಿನ ಶ್ರೀರಾಮ ಸಭಾಂಗಣದಲ್ಲಿ ಆಯೋಜಿಸಿದ್ದ ಮುನೀರ್ ಕಾಟಿಪಳ್ಳ ಅವರ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಸಮಾವೇಶದಲ್ಲಿ ಕಾಣಸಿಗುವುದು ಬರೀ ಶ್ರೀಮಂತರು. ಆದರೆ ಕಮ್ಯುನಿಷ್ಟರ ಸಮಾವೇಶದಲ್ಲಿ ಯಾರೂ ಕೋಟ್ಯಧೀಶರಿಲ್ಲ. ಇಲ್ಲಿ ಬಂದಿರುವವರು ಬಡ ಜನರು, ದುಡಿಯುವ ಜನರು. ನಾನು ಈ ಬಡ ಜನರ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಪುನರುಚ್ಚಿಸಿದರು.
ಬೀಡಿ ಕಾರ್ಮಿಕರ ಪರಿಸ್ಥಿತಿಯನ್ನು ಅರಿಯಲು ಮೊಯ್ದಿನ್ ಬಾವಾ ಹಾಗೂ ಪಾಲೇಮಾರರಿಗೆ ಗೊತ್ತಿಲ್ಲ. ಈ ದುಡಿಯುವ ವರ್ಗದ ಪರವಾಗಿ ನಿಂತದ್ದು ಕಮ್ಯುನಿಷ್ಟರು ಮಾತ್ರ. ಒಬ್ಬ ರಾಜಕಾರಣಿ ಬಡವರ ಬಗ್ಗೆ ಮಾತಾನಾಡಲು ಕಲಿತರೆ ಸಾಲದು, ಅವರಿಗೆ ಬಡತನದ ಅರಿವು ಇರಬೇಕು. ಆಗ ಮಾತ್ರ ಬಡವರ ಕಷ್ಟಕ್ಕೆ ಸ್ಪಂದಿಸಲು ಆತನಿಂದ ಸಾಧ್ಯ ಎಂದವರು, ಈ ಚುನಾವಣೆ ಧರ್ಮಗಳ ನಡುವಿನ ಚುನಾವಣೆ ಅಲ್ಲ. ಇದು ಬಡವರ ಹಾಗೂ ಶ್ರೀಮಂತರ ನಡುವಿನ ಚುನಾವಣಾ ಸಂಘರ್ಷ ಎಂದು ಹೇಳಿದರು.
ನಾನು ಹಕ್ಕು ಪತ್ರ ಕೊಡುತ್ತೇನೆ, ಸೀರೆ ಕೊಡುತ್ತೇನೆ ಎಂದು ಚುನಾವಣಾ ಸಮಾವೇಶ ನಡೆಸುತ್ತಿಲ್ಲ. ಯುವಕರು ಉದ್ಯೋಗ ಪಡೆದುಕೊಂಡು ಸ್ವತಃ ದುಡಿದು ಮನೆಯ ಮಕ್ಕಳು ತಮ್ಮ ತಾಯಿಗೆ ಸೀರೆತಂದು ಕೊಡಲಿ ಎಂದು ಬಯಸುತ್ತೇನೆ ಎಂದು ಮೊಯಿದ್ದೀನ್ ಬಾವಾ ವಿರುದ್ಧ ವಾಗ್ದಾಳಿ ನಡೆಸಿದರು.
ಸೌದಿಯಲ್ಲಿ ಜಾರಿಗೊಳ್ಳುತ್ತಿರುವ ನೂತನ ವಲಸೆ ನೀತಿಗಳಿಂದಾಗಿ ಕರಾವಳಿ ಭಾಗದ ಯುವಕರು ಉದ್ಯೋಗ ಕಳೆದುಕೊಂಡು ಊರಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಯುವಕರಿಗೆ ಸರ್ಕಾರದ ಮೂಲಕ ಸ್ಪಂದಿಸುವ ಬದಲಾಗಿ ಶಾಸಕ ಮೊಯ್ದಿನ್ ಬಾವಾ ಚುನಾವಣಾ ಸಂದರ್ಭದಲ್ಲಿ ಊರಿಗೆ ಬಂದು ಓಟು ಹಾಕಿ ಎಂದು ಕೇಳುತ್ತಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಕಾರ್ಯದರ್ಶಿ ವಸಂತಆಚಾರಿ, ಪಕ್ಷದ ಹಿರಿಯ ಮುಖಂಡರಾದ ಯುಬಿಲೋಕಯ್ಯ, ದಯಾನಂದ ಶೆಟ್ಟಿ, ಗಂಗಯ್ಯ ಅಮೀನ್, ಸದಾಶಿವ ದಾಸ್, ವಸಂತಿ ಕುಪ್ಪೆಪದವು, ಬಾವಾ ಪದರಂಗಿ, ಬೇಬಿ ನಾಯಕ್, ವಾರಿಜಾ, ಭವಾನಿ ಮತ್ತಿತರರು ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



