ಕೈಕಂಬ: ಮಕ್ಕಳು ಯಕ್ಷಗಾನ ಅಧ್ಯಯನ ಮಾಡುವ ಮುನ್ನ ಈ ಕಲೆಯ ಮೇಲಿನ ಅಭಿರುಚಿಯನ್ನು ಬೆಳೆಸಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಭಾನುವಾರ ಕೈಕಂಬದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪೊಳಲಿ ಘಟಕ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಯಕ್ಷಗಾನಕ್ಕೆ ಅನ್ವರ್ಥನಾಮ ಪಟ್ಲ ಸತೀಶ್ ಶೆಟ್ಟಿ. ಭಾಗವತರಾಗಿ ಸತೀಶ್ ಶೆಟ್ಟಿ ಒಂದು ಮೇಳವನ್ನೇ ಸಂಚಾಲಿಸುವ ಚಾಕಚಕ್ಯತೆ ಹೊಂದಿರುವ ಕಲಾವಿದರಾಗಿದ್ದಾರೆ ಎಂದರು, ಕಟೀಲು ಎಂದರೆ ಪಟ್ಲ, ಪಟ್ಲ ಎಂದರೆ ಕಟೀಲು ಎಂಬುದಂತೆ ಬೆಳೆಯುತ್ತಿದೆ. ಅದು ಹಾಗೆಯೇ ಬೆಳೆದರೆ ಮಾತ್ರ ಚೆನ್ನಾಗಿರುತ್ತದೆ. ಈ ಹಿಂದೆ ಕಟೀಲಿನಲ್ಲಿ ಬಲಿಪ ಭಾಗವತರ ಕಾಲವಿತ್ತು. ಈಗ ಪಟ್ಲ ಸತೀಶ್ ಕಾಲವಾಗಿದೆ ಎಂದು ಬಣ್ಣಿಸಿದರು.
ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕಾರಣಾಂತರಗಳಿಂದ ಕಟೀಲು ಮೇಳ ಬಿಟ್ಟಿದ್ದ ಮೋಹನರಿಗೆ ಸನ್ಮಾನ ಮಾಡಬೇಕೇ ಎಂಬ ಜಿಜ್ಞಾಸೆ ನಮ್ಮ ಸಂಘಟನೆಯಲ್ಲಿತ್ತು. ಅವರಂತಹ ದೊಡ್ಡ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದ್ದು, ಇದರಿಂದ ಅವರ ಆತ್ಮಸ್ಥೈರ್ಯ ಹೆಚ್ಚುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಪೊಳಲಿ ಘಟಕದ ವತಿಯಿಂದ ಕಲಾವಿದ ಅಮ್ಮುಂಜೆ ಮೋಹನ ಅವರಿಗೆ ಒಂದು ಲಕ್ಷ ರೂ. ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮ್ಮುಂಜೆ ಮೋಹನ, ಸತೀಶಣ್ಣರಿಗೆ ತಮ್ಮ ಸಹ ಕಲಾವಿದರ ಮೇಲೆ ಎಷ್ಟೊಂದು ಅಭಿಮಾನವಿದೆ ಎಂಬುದಕ್ಕೆ ಈ ಸನ್ಮಾನವೇ ಸಾಕ್ಷಿ. ನಾನು 18 ವರ್ಷದ ಹಿಂದಿನಿಂದಲೂ ಸತೀಶಣ್ಣನ ಅಭಿಮಾನಿಯಾಗಿದ್ದೇನೆ. ನನ್ನ ಸುದೈವವೋ ಎಂಬುದು ಗೊತ್ತಿಲ್ಲ, ಅವರು ನಾನಿದ್ದ ಕಟೀಲಿನ ಮೂರನೇ ಮೇಳಕ್ಕೆ ಭಾಗವತರಾಗಿ ಬಂದಿದ್ದರು. ಆದರೆ ಅವರು ಮೂರನೇ ಮೇಳದಲ್ಲಿ ಹೆಚ್ಚು ವರ್ಷ ಇರಲಿಲ್ಲ, ಎರಡನೇ ಮೇಳಕ್ಕೆ ಹೋಗಿದ್ದರು ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕೆನರಾ ಪ.ಪೂ.ಕಾಲೇಜು ನಿವೃತಪ್ರಾಂಶುಪಾಲ ಜಿ.ಶಂಕರಶೆಟ್ಟಿ ಗುಂಡಿಲಗುತ್ತು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಡ್ಯಾರ್ ಪುರುಷೂತ್ತಮ ಭಂಡಾರಿ, ಸುದೇಶ್ ರೈ ಸಿ.ಎ., ಸತ್ಯಜಿತ್ ಸುರತ್ಕಲ್, ಶ್ರೀಪತಿ ಕಿನ್ನಿಕಂಬಳ, ರಾಜೇಂದ್ರ ಹೆಗ್ಡೆ ಕೈಕಂಬ, ಡಾ.ರಮೇಶ್ ಮಲ್ಲಿ, ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಶೆಟ್ಟಿ, ನವನೀತ ಶೆಟ್ಟಿ ಕದ್ರಿ, ವಿನೋದ್ ಮಾಡ, ಉಮೇಶ್ ಆರ್ ಭಂಡಾರಿ, ಕೈಕಂಬ, ರಾಜೀವ ಕೆ. ಕೈಕಂಬ, ಪೊಳಲಿ ಲೋಕೇಶ್ ಭರಣಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಧರ್ ರಾವ್ ಸ್ವಾಗತಿಸಿ , ಜನಾರ್ಧನ ಅಮ್ಮುಂಜೆ ನಿರೂಪಿಸಿ ಸತೀಶ್ ಶೆಟ್ಟಿ ವಂದಿಸಿದರು.
ಗೌರಾವರ್ಪಣೆ: ಕಾರ್ಯಕ್ರಮದಲ್ಲಿ ಕಟೀಲು ಮೇಳದ ನೇಪಥ್ಯ ಕಲಾವಿದರಾದ ವಿಠಲ ಶೆಟ್ಟಿ ಬೆಳ್ತಂಗಡಿ, ಪುತ್ತು ನಾಯ್ಕ್, ರಘು ಶೆಟ್ಟಿ ನಾಳ, ವಿಶ್ವನಾಥ ಶೆಟ್ಟಿ ಬಿಳಿಯೂರು ಅವರಿಗೆ ಗೌರಾವರ್ಪಣೆ ಮಾಡಲಾಯಿತು.
ಸ್ಮರಣೆ: ಕಾರ್ಯಕ್ರಮಕ್ಕೂ ಮುನ್ನ ಮೂವರು ಹಿರಿಯ ಯಕ್ಷಗಾನ ಕಲಾವಿದರಾದ ದಿ.ಅಣ್ಣಪ್ಪ ಮಿಜಾರು, ದಿ. ಜನಾರ್ಧನ ಜೋಗಿ ಮಂಜೇಶ್ವರ, ದಿ.ದೇರಣ್ಣ ಬಜ್ಪೆ ಅವರನ್ನು ಸ್ಮರಿಸಲಾಯಿತು.
ದ್ವಿತೀಯ ವರ್ಧಂತಿ ಉತ್ಸವದ ಪ್ರಯುಕ್ತ ಯಕ್ಷ-ಗಾನ-ವೈಭವ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ “ಬ್ರಹ್ಮರ್ಷಿ ವಾಲ್ಮೀಕಿ” ೆಂಬ ಯಕ್ಷಗಾನ ಬಯಲಾಟ ನಡೆಯಿತು



