ಮೂಡುಬಿದಿರೆ: ಮಕ್ಕಳ ಭವಿಷ್ಯವನ್ನು ರೂಪಿಸುವ ಅಂಗನವಾಡಿಗಳ ಬಗ್ಗೆ ಸರಕಾರ ಮತ್ತು ಜನರು ಹೆಚ್ಚಿನ ಗಮನ ಹರಿಸಬೇಕು ಎಂದು ದ.ಕ. ಜಿಲ್ಲಾ ಕಣ್ಣಿನ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಧೀರ್ ಹೆಗ್ಡೆ ಹೇಳಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಮೂಡುಬಿದಿರೆ ಗೆಳೆಯರ ಬಳಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ದ.ಕ. ಜಿಲ್ಲೆಯ ಪ್ರಥಮ ಅಂಗನವಾಡಿ ಮಕ್ಕಳ ಮೇಳದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದ್ದರು.
ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ, ಅಂಗನವಾಡಿ ಪುಟಾಣಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಈ ವಿಶಿಷ್ಟ ಕಾರ್ಯಕ್ರಮ ವಿನೂತನವಾಗಿದ್ದು, ಅಂಗನವಾಡಿ ಶಿಕ್ಷಕಿಯರನ್ನು ಗೌರವಿಸುವ ಕೆಲಸ ಪುಣ್ಯದ ಕೆಲಸ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ, ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ಮಾತನಾಡಿ, ಹೊಸತನದ ಪಯಣವೇ ನಮ್ಮ ಗುರಿ. ನಾವು ಮಾಡುವ ಕೆಲಸ ವಿಭಿನ್ನವಾಗಿರಬೇಕು ಎಂದು ಬಯಸುತ್ತೇವೆ. ಬೆಳದಿಂಗಳ ಹತ್ತರ ಹತ್ತು ಹೆಜ್ಜೆಗಳು ಸರಣಿ ಕಾರ್ಯಕ್ರಮದ ಎರಡನೇ ಕಾರ್ಯಕ್ರಮ ಇದಾಗಿದೆ ಎಂದು ವಿವರಿಸಿದರು.
ಈ ವೇಳೆ ಅಂಗನವಾಡಿ ಶಿಕ್ಷಕಿಯರಾದ ಶಶಿಕಲಾ ನಾಗರಬೆಟ್ಟು, ಜಯಂತಿ ಗಾಂಧಿನಗರ, ಸುಜಾತಾ ಲಾಡಿ, ಸುಮತಿ ಮೂಡುಬಿದಿರೆ, ವಿಜಯಾ ಪುಚ್ಚೇರಿಕಟ್ಟೆ, ಹೇಮಾವತಿ ಮರಿಯಾಡಿ, ಶೋಭಾ ಗಾಜಿಗಾರ ಪಲ್ಕೆ, ಸುಪ್ರಿಯಾ ಶೆಟ್ಟಿ ಕರಿಂಜೆಗುತ್ತು, ಕುಶಲ ಮೂಡುಮಾರ್ನಾಡು, ಚಂದ್ರಾವತಿ ಮಿತ್ತಬೈಲು ಕೊಡ್ಯಡ್ಕ, ಶಶಿಕಲಾ ಒಂಟಿಕಟ್ಟೆ, ಗುಣಶೀಲ ಪುತ್ತಿಗೆ, ಶ್ರೀದೇವಿ ಗುಂಡ್ಯಡ್ಕ, ಯವುಜಿನ್ ಪಿಂಟೋ ಗುಡ್ಡೆಯಂಗಡಿ, ಮೇಬಲ್ ಪಳಕಳ, ಕಲ್ಲಮುಂಡ್ಕೂರು ಎಂ.ವಿಜಯ ಪೈ ಮತ್ತು ವಿಶೇಷ ಆಹ್ವಾನಿತ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೇರಿ ಶಾಲೆಯ ಶಿಕ್ಷಕಿ ಸುಕನ್ಯಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ಯಾಮಲಾ ಸಿ.ಕೆ, ಯಕ್ಷಮೇನಕ ಸಂಸ್ಥಾಪಕ ಸದಾಶಿವರಾವ್ ನೆಲ್ಲಿಮಾರ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಕಾತ್ಯಾಯಿನಿ ಮೂಡುಬಿದಿರೆ, ಶುಭ ಬೆಳುವಾಯಿ, ರತಿ ಶೆಟ್ಟಿ ಶಿರ್ತಾಡಿ, ಮಜಾಭಾರತ ಖ್ಯಾತಿಯ ಆರಾಧನಾ ಭಟ್, ಎಂ.ಚಂದ್ರಹಾಸ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
