ಬೆಂಗಳೂರು: ಬೃಹತ್ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಪ್ರತ್ಯೇಕ ಗೋಕಾಕ ಹಾಗೂ ಚಿಕ್ಕೋಡಿ ಜಿಲ್ಲೆ ರಚಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸಿಎಂ ಸಿದ್ಧರಾಮಯ್ಯ ಬಳಿ ಗುರುವಾರ ತೆರಳಿದ್ದ ನಿಯೋಗ ನಿರಾಶೆಯಿಂದಲೇ ಮರಳಿದೆ.
ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ಹಾಗೂ ಚಿಕ್ಕೋಡಿ ಪಟ್ಟಣಗಳಿಗೆ ಜಿಲ್ಲಾ ಸ್ಥಾನ ಮಾನ ನೀಡಬೇಕೆಂಬ ಬೇಡಿಕೆಗೆ ತಮ್ಮ ಸಹಮತವೇನೋ ಇದೆ. ಆದರೆ, ಈ ಕುರಿತಂತೆ ಜಿಲ್ಲೆಯ ಸಂಸದರು, ಶಾಸಕರು ಮತ್ತು ಇತರೆ ಮುಖಂಡರೊಂಡನೆ ಸಮಾಲೋಚಿಸಿದ ನಂತರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ನಿಯೋಗಕ್ಕೆ ಹೇಳಿದ್ದು, ಅತಿ ಆಸೆಯಿಂದ ಹೋಗಿದ್ದ ಮುಖಂಡರ ಮುಖ ಕಳೆಗುಂದಿಸಿತು.
ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾಪ ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೇ ಇದೆ. ಆಗ ತಾನು ಉಪಮುಖ್ಯಮಂತ್ರಿಯಾಗಿದ್ದೆ. ವಿಭಜನೆ ನಿರ್ಧಾರಕ್ಕೆ ಅಂದಿನ ಸರಕಾರ ಒಪ್ಪಿಗೆ ನೀಡಿ,, ಗೆಜೆಟ್ ಪ್ರಕಟಣೆ ಕೂಡ ಆಗಿತ್ತು. ಆದರೆ, ಗಡಿ ವಿವಾದದ ಕರಿನೆರಳು, ಮಹಾಜನ ಆಯೋಗದ ವರದಿ ಅನುಷ್ಠಾನವಾಗದಿರುವುದು ಎಲ್ಲವೂ ಸೇರಿ ವಿಭಜನೆ ವಿಚಾರ ಕೈಬಿಟ್ಟುಹೋಗಿತ್ತು ಎಂದು ಸಿಎಂ ನಿಯೋಗಕ್ಕೆ ತಿಳಿಸಿದರು.
ಅಭಿವೃದ್ಧಿ ದೃಷ್ಟಿಯಿಂದ , ಸುಗಮ ಆಡಳಿತ ವ್ಯವಸ್ಥೆ ವಿಚಾರದಿಂದ ನೋಡಿದರೆ ಜಿಲ್ಲಾ ವಿಭಜನೆ ಆಗಬೇಕು. ಆದರೆ, ಕೆಲವು ತಾಂತ್ರಿಕ ಅಡಚಣೆಗಳು ಈ ಪ್ರಕ್ರಿಯೆಗೆ ಅಡ್ಡಿಯಾಗಿವೆ. ಹೀಗಾಗಿ ಸಂಸದರು, ಶಾಸಕರು ಮತ್ತು ಇತರ ಮುಖಂಡರೊಡನೆ ಚರ್ಚೆಯಾಗಬೇಕಿದೆ ಎಂದು ಸಿ.ಎಂ. ಹೇಳಿದರು.
ನೀವು ಮನಸ್ಸು ಮಾಡಿದರೆ ಖಂಡಿತ ವಿಭಜನೆ ಸಾಧ್ಯವಾಗುತ್ತದೆ. ಅದಕ್ಕಾಗಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದ ಸದಸ್ಯರು ಮತ್ತೊಮ್ಮೆ ಒತ್ತಾಯಿಸಿದಾಗ, ” ನಾನು ಅಧಿಕಾರದಲ್ಲಿದ್ದು ಐದು ವರ್ಷಗಳಾದವು. ಇದುವರೆಗೂ ಈ ವಿಷಯವನ್ನು ನನ್ನ ಗಮನಕ್ಕೆ ತಾರದ ನೀವು ಕೊನೆ ಘಳಿಗೆಯಲ್ಲಿ ಬಂದಿದ್ದೀರಿ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ ‘ ಎಂದು ಹೇಳಿದಾಗ ನಿಯೋಗಕ್ಕೆ ಬೇಸರ ಉಂಟಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ ಸಂಸದರು, ಶಾಸಕರ ಸಭೆ ಕರೆಯುವ ಬಗ್ಗೆ ತೀರ್ಮಾನಿಸುವುದಾಗಿಯೂ ಸಿಎಂ ಕೊನೆಗೆ ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ನಿಯೋಜಿತ ಗೋಕಾಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಮಾಜಿ ಶಾಸಕರಾದ ಎಂ.ಎಲ್. ಮುತ್ತಣ್ಣವರ, ಚಂದ್ರಶೇಖರ ನಾಯಕ, ಅಶೋಕ ಪೂಜಾರಿ, ಎಸ್. ವಿ. ದೇಮಶೆಟ್ಟಿ, ಮುಖಂಡರಾದ ೆಸ್. ಎ. ಕೋತ್ವಾಲ, ಅಶೋಕ ಓಸವಾಲ, ರಾಮಣ್ಣ ಹುಕ್ಕೇರಿ, ಎಂ.ಜಿ. ಮುಚಳಂಬಿ, ಮಹಾಂತೇಶ ಮಠಪತಿ, ಡಾ. ರಾಜೇಂದ್ರ ಸಣ್ಣಕ್ಕಿ, ಸಲೀಂ ಗೋಕಾಕ, ಬಸವರಾಜ ಖಾನಪ್ಪನವರ, ಕಿರಣ ತಮಾಮಗರ, ಪ್ರಕಾಶ ಬಾಗೋಜಿ, ವಿಷ್ಣು ಲಾತೂರ, ಆನಂದ ಗೋಟಡಕಿ, ತುಕಾರಾಮ ಕಾಗಲ್, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ಅಶೋಕ ಪಾಟೀಲ, ಕೆ.ಡಿ. ಕಲಾಲ ಇನ್ನೂ ಮೊದಲಾದವರು ಸಿಎಂ ಭೇಟಿಯಾದ ನಿಯೋಗದಲ್ಲಿದ್ದರು.

