ಕಾರ್ಕಳ : ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಚುನಾವಣಾ ಕಣ ರಂಗೇರುತ್ತಿದೆ. ಈ ಬಾರಿಯೂ ಕುಟುಂಬ ರಾಜಕಾರಣ ವಿಜೃಂಭಿಸುವ ಸಾಧ್ಯತೆಗಳು ಹೆಚ್ಚಾಗಿದೆ.ಕುಟುಂಬ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿಯೂ ಅಪ್ಪ,ಮಕ್ಕಳು ರಾಜ್ಯಭಾರ ನಡೆಯುತ್ತಲೇ ಇದೆ.
ಇದೀಗ ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಂ.ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಸರದಿ.ಹರ್ಷ ಮೊಯ್ಲಿ ರಾಜಕಾರಣಕ್ಕೆ ಪ್ರವೇಶಿಸುವುದು ಪಕ್ಕಾ ಆಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿರೋದು ಕಾರ್ಕಳ ವಿಧಾನಸಭಾ ಕ್ಷೇತ್ರ. ಮೂರು ಮಂದಿ ಪ್ರಬಲ ಆಕಾಂಕ್ಷಿಗಳು ಪಕ್ಷಕ್ಕೆ ನುಂಗಲಾರದ- ಉಗುಳಲೂ ಸಾಧ್ಯವಾಗದೆ ಬಿಸಿ ತುಪ್ಪದಂತಾಗಿದ್ದಾರೆ.ಈ ನಡುವೆ ವೀರಪ್ಪ ಮೊಯ್ಲಿ ಪುತ್ರ, ಕ್ಷೇತ್ರದ ಓರ್ವ ಪ್ರಬಲ ಟಿಕೆಟ್ ಆಕಾಂಕ್ಷಿ ಹರ್ಷ ಮೊಯ್ಲಿ ಸಾರ್ವಜನಿಕವಾಗಿ ಉಡುಪಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜನೆಯ ಹಿಂದುಳಿದವರ ಸಮಾವೇಶಕ್ಕೆ ಹರ್ಷ ಮೊಯ್ಲಿ ರಾಜಕಾರಣಿಯ ಗೆಟಪಿನಲ್ಲಿ ಬಂದಿಳಿದಿದ್ದಾರೆ. ಹರ್ಷ ಮೊಯ್ಲಿ ಆಗಮನ, ನಾಯಕರ ಜೊತೆ ಮಾತುಕತೆಗಳನ್ನು ನೋಡಿದ್ರೆ ಟಿಕೆಟ್ ಮೊಯ್ಲಿ ಪುತ್ರನಿಗೆ ಪಕ್ಕಾ ಆದಂತಿದೆ. ಮೊಯ್ಲಿ ಪುತ್ರನಿಗೆ ಕಾರ್ಕಳದಲ್ಲಿ ಟಿಕೆಟ್ ಕೊಟ್ಟರೆ ಪಕ್ಷದೊಳಗೆ ಭಿನ್ನಮತ ಆಗೋದ್ರಲ್ಲಿ ಸಂಶಯವೇ ಇಲ್ಲ.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಈ ಬಾರಿ ಕೈ ಪಕ್ಷದ ಪ್ರಬಲ ಆಕಾಂಕ್ಷಿ. ಕಳೆದ ಎರಡು ವರ್ಷದಿಂದ ಉದಯ ಕುಮಾರ್ ಶೆಟ್ಟಿ ಕ್ಷೇತ್ರದಲ್ಲಿ ಎಲ್ಲಾ ತರದ ಸಿದ್ಧತೆ ನಡೆಸಿದ್ದಾರೆ. ೨೫ ವರ್ಷದಿಂದ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮತದಾರರ ಬೆಂಬಲ ಇದೆ, ಮಲಗಿದ್ದ ಕಾಂಗ್ರೆಸ್ಸನ್ನು ಬಡಿದೆಬ್ಬಿಸಿದ್ದೇನೆ ಎಂದು ಹೇಳಿರುವ ಉದಯ ಕುಮಾರ್ ಶೆಟ್ಟಿ, ಕೊನೆಯ ಹಂತದಲ್ಲಿ ಟಿಕೆಟ್ ಕೈತಪ್ಪಿದರೆ ಬಂಡಾಯವೇಳುವುದು ಗುಟ್ಟಾಗಿ ಉಳಿದಿಲ್ಲ.
ಕಾರ್ಕಳದಲ್ಲಿ ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿರುವ ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ವೀರಪ್ಪ ಮೊಯ್ಲಿಯೇ ಮುಂದೆ ನಿಂತು ಈ ಬಾರಿ ಟಿಕೆಟ್ ನನ್ನ ಮಗನಿಗೆ ಅಂತ ಹೇಳಿದ್ರೆ ಮೊಯ್ಲಿ ಶಿಷ್ಯ ಭಂಡಾರಿ ಸೈಲೆಂಟಾಗ್ತಾರೆ.
ಕಾರ್ಕಳಕ್ಕೆ ಒಬ್ಬ ಕಾಂಗ್ರೆಸ್‌ನ ಎಂಎಲ್‌ಎ ಬೇಕು. ಈಗಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವಧಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕ ಇದ್ದರೆ ಅಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಕೆಪಿಸಿಸಿ, ಎಐಸಿಸಿ ಸೆಲೆಕ್ಟ್ ಮಾಡೋಡು. ನನಗೆ ಟಿಕೆಟ್ ಫೈನಲ್ ಆಗಿದೆ ಎಂಬೂದು ಸರಿಯಲ್ಲ. ಕಾರ್ಕಳದಲ್ಲಿ ಹಲವಾರು ನಾಯಕರಿದ್ದಾರೆ.
ಎಲ್ಲರಿಗೂ ನನಗೆ ಟಿಕೆಟ್ ಸಿಕ್ಕರೆ ಕೆಲಸ ಮಾಡಬಹುದು ಎಂಬ ಆಕಾಂಕ್ಷೆಯಿದೆ. ಅದು ತಪ್ಪೂ ಅಲ್ಲ. ರಾಜಕೀಯದಲ್ಲಿ ಅಕಾಂಕ್ಷೆಗಳು ತಪ್ಪಲ್ಲ. ಕಾಂಗ್ರೆಸ್ ವಿನ್ ಆಗ್ಬೇಕು ಅನ್ನೋದು ಎಲ್ಲರ ಆಕಾಂಕ್ಷೆ. ಒಂದು ವೇಳೆ ಪಾರ್ಟಿ ಹೇಳಿದರೆ ನಾನು ಸ್ಪರ್ಧೆ ಮಾಡಲು ಸಿದ್ದನಿದ್ದೇನೆ ಹರ್ಷ ಮೊಯ್ಲಿ ಹೇಳಿದ್ದಾರೆ.

