ಲಂಡನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವವಿಖ್ಯಾತ ವಿಜ್ಞಾನಿ ಹಾಗೂ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ತಮ್ಮ 76ನೇ ವಯಸ್ಸಿನಲ್ಲಿ ಇಂದು ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ.
ಬ್ಲಾಕ್ ಹೋಲ್, ಕ್ವಾಂಟಮ್ ಮೆಕ್ಯಾನಿಸಮ್ ಹಾಗೂ ಸಾಪೇಕ್ಷತಾ ಸಿದ್ಧಾಂತದ ಕುರಿತ ಸಂಶೋಧನೆಗೆ ಪ್ರಸಿದ್ಧಿ ಹಾಕಿಂಗ್ ಪಡೆದುಕೊಂಡಿದ್ದರು.
ಇಂಗ್ಲೆಂಡ್ ನ ಕ್ಯಾಂಬ್ರಿಡ್ಜ್ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರೆಂದು ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಹಾಗೂ ಟಿಮ್ ತಿಳಿಸಿದ್ದಾರೆ.
1942 ಜನವರಿ 8ರಂದು ಇಂಗ್ಲೆಂಡ್ನಲ್ಲಿ ಜನಿಸಿದ್ದ ಹಾಕಿಂಗ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಿಶ್ವಾದ್ಯಂತ ಪರಿಚಿತರು.
ಕಳೆದ ಹಲವಾರು ದಶಕಗಳಿಂದ ಅವರು ನಿಧಾನಗತಿಯಲ್ಲಿ ದೇಹವನ್ನು ಆಕ್ರಮಿಸುವ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಲೆರೋಸಿಸ್ (ಎಆರ್ಎಸ್) ಎಂಬ ನರಮಂಡಲವನ್ನು ಬಾಧಿಸುವ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದಾಗಿ ಅವರು ಹಂತಹಂತವಾಗಿ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರು. ಅವರು ತಮ್ಮ ಕೆನ್ನೆಗೆ ಅಳವಡಿಸಲ್ಪಟ್ಟ ಮಾತುಗಳನ್ನು ಆಡುವ ಸಾಧನ (ಸ್ಪೀಚ್ ಜನರೇಟಿಂಗ್ ಡಿವೈಸ್) ಉಪಯೋಗಿಸಿ ಸಂವಹನವನ್ನು ನಡೆಸುತ್ತಿದ್ದರು.

