ಗುರುಪುರ : ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನದ(ಶ್ರೀ ವೈದ್ಯನಾಥ) ಜೀರ್ಣೋದ್ಧಾರ ನಿಮಿತ್ತ ಮಾ. 11ರಂದು ಬೆಳಿಗ್ಗೆ ಗುರುಪುರ ಶ್ರೀ ನೀಲಕಂಠ-ಜಂಗಮ ಮಠದಲ್ಲಿ ಊರ ಸಮಸ್ತರ ಪೂರ್ವಭಾವಿ ಸಭೆಯೊಂದು ಜರುಗಲಿದೆ.
ಬಂಡಿ ಜಾತ್ರೆಯ ಸಂದರ್ಭದಲ್ಲಿ ಶ್ರೀ ವೈದ್ಯನಾಥ ನೀಡಿದ ಅಪ್ಪಣೆಯಂತೆ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ವಿಷಯವಾಗಿ ಮಠದ ಸ್ವಾಮಿ ಹಾಗೂ ಊರವರ ಜೊತೆ ಸಮಾಲೋಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ.
ಮಾ. 13ರಂದು ಸಂಜೆ 6ಕ್ಕೆ ಕ್ಷೇತ್ರ ತಂತ್ರಿ, ದೈವಜ್ಞರು, ಗುತ್ತುಗಳ ಯಜಮಾನರು, ಸೇವಾ ಮನೆತನದವರು ಮತ್ತು ಊರ ಹತ್ತು ಸಮಸ್ತರ ಸಮಕ್ಷಮದಲ್ಲಿ ಪರಿಹಾರಾದಿ ಕಾರ್ಯಕ್ರಮದಂಗವಾಗಿ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಅಘೋರ ಹೋಮ, 6,000 ಲಲಿತ ಸಹಸ್ರನಾಮ ಜಪ ಜರುಗಲಿದೆ.
ಮಾ. 14ರಂದು ಬೆಳಿಗ್ಗೆ ಸಂಕೋಚ ಮಾಡಿ ದೈವದ ಗರ್ಭಗುಡಿಯಲ್ಲಿರುವ ದೈವದ ಮಂಚವನ್ನು ಭಂಡಾರ ಮನೆಯ ಚಾವಡಿಗೆ ಸ್ಥಳಾಂತರಿಸಲಾಗುವುದು. ಮಾ 13ರಂದು ದೈವದ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳುವ ಊರವರು ಜೀರ್ಣೋದ್ಧಾರ ಸಂಕಲ್ಪ ನಿಧಿಗೆ ಒಂದು ಹಿಡಿ ಕಾಣಿಕೆ(ಒಂದು ಹುಂಡಿ), ಒಂದು ಸೇರು ಅಕ್ಕಿ ಮತ್ತು ಒಂದು ತೆಂಗಿನಕಾಯಿ ಕಾಣಿಕೆಯಾಗಿ ಒಪ್ಪಿಸಬೇಕೆಂದು ದೈವಸ್ಥಾನದ ಪ್ರಕಟಣೆಯೊಂದು ತಿಳಿಸಿದೆ.
