ಬೆಂಗಳೂರು: ಜಯನಗರ ಹಾಗೂ ಜೆ.ಪಿ. ನಗರದ ರೌಡಿ ಶೀಟರ್ ಮುತ್ತು ರಾಜ್(35)ನನ್ನು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೂಲತ ಕನಕಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದ ನಿವಾಸಿಯಾಗಿರುವ ಮುತ್ತುರಾಜ್ ನಗರದಲ್ಲಿ ಆಟೋ ಚಾಲಕನಾಗಿದ್ದ. ಮುತ್ತುರಾಜ್ ನಿನ್ನೆ ರಾತ್ರಿ ತನ್ನ ಅಣ್ಣ ಹಾಗೂ ಭಾವ ಮೈದುನನೊಂದಿಗೆ ಪಾರ್ಟಿಗೆ ತೆರಳಿದ್ದಾಗ ದುಷ್ಕರ್ಮಿಗಳು ನಾಡಬಂದೂಕಿನಿಂದ ಗುಂಡಕ್ಕಿ ಕೊಲೆ ಮಾಡಿದ್ದಾರೆ.
ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಾರ್ಟಿಯ ನಂತರ ಆಟೋದಲ್ಲಿ ಮಲಗಿದ್ದ ಮುತ್ತುರಾಜ್ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

