ಪೊಳಲಿ: ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ಒಂದೂವರೆ ಕೋಟಿ.ರೂ. ವೆಚ್ಚದಲ್ಲಿ ಇಲ್ಲಿನ ದೇವರಗುಡ್ಡೆ-ಕಲ್ಕುಟದಿಂದ ಪೊಳಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬುಧವಾರ ಪೊಳಲಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪೊಳಲಿ ಹಾಗೂ ಮಳಲಿಗೆ ರಸ್ತೆ ಸಂಪರ್ಕಿಸುವ ಡ್ಯಾಮ್ ಗೆ ಸರಕಾರದಿಂದ ಅನುದಾನ ಮಂಜೂರಾತಿಗೊಂಡಿದ್ದು, ಮುಂದಿನ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ. ಅಲ್ಲದೆ, ಇಲ್ಲಿನ ಅಮ್ಮುಂಜೆಯ ಬೆಂಜನಪದವಿನಲ್ಲಿ ಸುಮಾರು 10 ಕೋ.ರೂ.ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಸಚಿವ ರೈ ಕಲ್ಪನೆ-ಬಡಗಬೆಳ್ಳೂರು-ಕಿರಾಳೆ-ಎರ್ಮಾಲ್, ಕರಿಯಂಗಳ ಗ್ರಾಮದ ಪಲ್ಲಿಪಾಡಿಯ ಪರಿಶಿಷ್ಟ ಕಾಲನಿ, ಬಡಗಬೆಳ್ಳೂರು ಗ್ರಾಮದ ಸಾಣಕಟ್ಟ ಕಾಗುಡ್ಡೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ, ಕರಿಯಂಗಲ ಗ್ರಾಮದ ದೇವರ ಗುಡ್ಡೆ ಹಾಗೂ ಸಾಣೂರು ಪದವಿನ ನೂತನ ಕಾಂಕ್ರೀಟಿಕರಣ ರಸ್ತೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಮಾತನಾಡಿದರು. ಕರಿಯಂಗಳ ಮಾಜಿ ಗ್ರಾ.ಪಂ.¸ಅಧ್ಯಕ್ಷ ಚಂದ್ರ ಶೇಖರ್ ಭಂಡಾರಿ, ಪಿಡಿಒ ಪದ್ಮನಾಯ್ಕ್, ಗ್ರಾ.ಪಂ. ಸದಸ್ಯೆ ವೀಣಾ ಆಚಾರ್ಯ, ಸ್ಥಳೀಯ ಕಾಂಗ್ರಸ್ ಅಧ್ಯಕ್ಷ ಉಮೇಶ್ ಆಚಾರ್ಯ, ಚಂದ್ರಹಾಸ ಪಲ್ಲಿಪಾಡಿ, ಇಂಜಿನಿಯರಿಂಗ್ ಉಮೇಶ್ ಭಟ್, ಸಹಾಯಕ ಇಂಜಿನಿಯರಿಂಗ್ ಅರುಣ್ ಪ್ರಕಾಶ್, ದೇವಾಲಯದ ಅರ್ಚಕ ಮಾಧವ ಭಟ್, ಸೂರ್ಯ ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.









