ಮಂಗಳೂರು: ಸುಳ್ಳು ಭರವಸೆ ನೀಡುವ ಒಲಾ ಹಾಗೂ ಉಬಾರ್ ಟ್ಯಾಕ್ಸಿ ಕಂಪೆನಿಗಳ ವಿರುದ್ಧ ಮುಂದಿನ ವಾರದಿಂದ ದ.ಕ. ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಡ್ರೈವರ್ಸ್ ಮತ್ತು ಓನರ್ ಅಸೋಸಿಯೇಶನ್ ನಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಉಬರ್ ಮತ್ತು ಒಲಾ ಕಂಪೆನಿಗಳು ಸುಳ್ಳು ಹಾಗೂ ಆಕರ್ಷಕ ಆಫರ್‌ಗಳನ್ನು ನೀಡಿ ಸಾವಿರಾರು ರೂ. ದುಡಿಮೆ ಮಾಡಬಹುದೆಂದು ವಿದ್ಯಾವಂತ ಯುವಕರನ್ನು ನಂಬಿಸಿ ಬ್ಯಾಂಕ್ ಸಾಲ ಮಾಡಿಸಿ ಕಾರು ಖರೀದಿ ಮಾಡಿಸಿದ್ದಾರೆ. ಕಂಪೆನಿಯು ಕೊಡುವ ಬಾಡಿಗೆಗಳಿಂದ ಜೀವನ ನಡೆಸಲು ಮತ್ತು ಮತ್ತು ಬ್ಯಾಂಕ್ ಸಾಲ ಪಾವತಿಸಲು ಸಾಧ್ಯವಾಗದೆ ಯುವಕರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರುಗಳ ಸಂಖ್ಯೆ ಹೆಚ್ಚು ಮಾಡಿ ಇನ್ಸೆಂಟಿವ್ ಸಿಗದಂತೆ ತಡೆಯುವ ಸಲುವಾಗಿ ಹೊಸ ಹೊಸ ಭರವಸೆ ನೀಡಿ ಹೊಸ ಕಾರುಗಳನ್ನು ಅಟ್ಯಾಚ್ ಮಾಡಿಸುತ್ತಿದೆ. ಮತ್ತು ವಾರಕ್ಕೊಮ್ಮೆ ದರ ಪಟ್ಟಿಯನ್ನು ಬದಲಾಯಿಸುತ್ತಿದ್ದು, ಇದರಿಂದ ಕಾರು ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ಡಿಸೇಲ್ ಬೆಲೆ ದಿನ ದಿನಕ್ಕೆ ಏರಿಕೆಯಾಗುತ್ತಿದ್ದು, ಕಂಪೆನಿ ಬಾಡಿಗೆ ದರ ಇಳಿಸುತ್ತಿರುದರಿಂದ ಕಾರು ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ನಮ್ಮ ಹಲವು ಬೇಡಿಕೆ ಮುಂದಿಟ್ಟುಕೊಂಡು ನ್ಯಾಯ ಸಿಗುವ ತನಕ ಮುಂದಿನ ವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಗರಾಜ್ ರೈ, ಪ್ರಧಾನ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಜತೆ ಕಾರ್ಯದರ್ಶಿ ಕಮಲಾಕ್ಷ ಬಜಾಲ್, ಉಪಾಧ್ಯಕ್ಷ ಮುನ್ನಾವರ್ ಮತ್ತಿತರರು ಉಪತ್ಥಿರಿದ್ದರು.
