ಕುಡುಪು :ರಾಷ್ಟ್ರ ಭಕ್ತಿ ಎಂದರೆ ದೇಶದ ಕಾನೂನು ಗೌರವಿಸುವುದು ಎಂದರ್ಥ. ಅಂತೆಯೇ ಭಗವಂತನ ಕಾನೂನೆಂಬುದು ಒಂದಿದ್ದು, ಅದನ್ನು ನಾವೆಲ್ಲರೂ ಶ್ರದ್ಧಾಪೂರ್ವಕವಾಗಿ ಪಾಲಿಸಿದರೆ ಜೀವನ ಸಾರ್ಥಕ್ಯವಾಗುವುದು. ಭಗವಂತನ ಕಾನೂನು ಮೀರಿ ದೇವಾಲಯ ಅಥವಾ ಇನ್ನೆಲ್ಲಿಯಾದರೂ ಅದೆಷ್ಟೋ ಪ್ರದಕ್ಷಿಣೆ ಬಂದರೆ ಏನೂ ಪ್ರಯೋಜನವಿಲ್ಲ. ದೇವರ ಮೇಲಿನ ಭಕ್ತರ ಪ್ರೀತಿ ಹಾಗೂ ನಿಷ್ಠೆಗೆ ಕುಡುಪುವಿನಲ್ಲಿ ನಡೆದ ಈ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷ್ಯಿ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಅವರು ಭಾನುವಾರ ಕುಡುಪು ಶ್ರೀ ಅನಂತ ಪದ್ಮನಾಭ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತ ಸಮುದಾಯ ಹಾಗೂ ಸ್ವಯಂ ಸೇವಕರನ್ನು ಅಭಿನಂದಿಸಿ ಮಾತನಾಡಿದರು.
ಕುಡುಪು, ಉಡುಪಿ, ಸುಬ್ರಹ್ಮಣ್ಯಕ್ಕೆ `ಅನಂತ’ ಧಾರ್ಮಿಕ ವಿಶಿಷ್ಟ ಸಂಬಂಧವಿದೆ ಎಂದ ಶ್ರೀಗಳು, ಹಿಂದೂ ಧರ್ಮದಲ್ಲಿ ಬಹು ದೇವರ ಆರಾಧನೆ ಇದ್ದರೂ, ಏಕ ದೇವರ ಕಲ್ಪನೆ ನಮ್ಮಿಂದಲೇ ಮೂಡಿ ಬಂದಿದೆ. ಈ ವಿಷಯ ಉಪಷತ್ತಿನಲ್ಲಿ ಉಲ್ಲೇಖಗೊಂಡಿದೆ. ಆದರೆ ನಮ್ಮ ದೇವರಿಗೆ ಹಲವು ಹೆಸರು ಮತ್ತು ಆಕಾರ ನೀಡಿದ್ದೇವೆ. ಮೂಲದಲ್ಲಿ ನಮ್ಮದೂ ಏಕ ದೇವರೇ ಆಗಿದ್ದಾರೆ ಎಂದರು.
ನಂತರ ಮಾತನಾಡಿದ ಸುಬ್ರಹ್ಮಣ್ಯ ಮಠದ ಶ್ರೀಗಳು ಇದು ನಾಗ ದೇವರ ಪ್ರಾರ್ಥನೆ ನಡೆಯುವ ಆಲಯ. ಇಲ್ಲಿನ ಪ್ರಧಾನ ದೇವರಾದ ನಾಗನಿಗೆ ವಿಶಿಷ್ಟವಾದ ಸ್ಥಾನವಿದೆ. ಭಗವಂತನಿಗೆ ಕೊನೆಯೆಂಬುದು ಇಲ್ಲ. ಆತನಿಗೆ `ಅನಂತ’ ಎಂಬ ಮಾತೊಂದಿದ್ದು, ಕುಡುಪುವಿನಲ್ಲಿ ಈ ಶ್ರೇಷ್ಠತೆ ಸದಾ ಸಾರುವಂತಿದೆ. ಅನಂತ ಪದ್ಮನಾಭನ ಉಪಾಸನೆ ಮಾಡಬೇಕೆಂದು ಭಾಗವತ ಹೇಳುತ್ತದೆ. ಇಲ್ಲಿನ ವಾಸ್ತುವೂ ನಾಗ ದೇವಾಲಕ್ಕೆ ತಕ್ಕಂತೆ ಇರುವುದೂ ದೇವರ ಪ್ರಸಿದ್ಧಿಗೆ ಮತ್ತೊಂದು ಕಾರಣವಾಗಿದೆ. ಇಲ್ಲಿನ ಜೀರ್ಣೋದ್ಧಾರ ಕಾರ್ಯ ಕಂಡು ನನ್ನ ಕಣ್ಣುಗಳು ತುಂಬಿ ಹೋಗಿವೆ. ಅತ್ಯಂತ ಶ್ರದ್ಧೆಯಿಂದ ನಡೆದ ಕುಡುಪು ಬ್ರಹ್ಮಕಲಶೋತ್ಸವಕ್ಕೆ ಭಕ್ತರು, ಬ್ರಹ್ಮಕಲಶೋತ್ಸವ ಸಮಿತಿಗಳ ಸಹಕಾರ ಮರೆಯಬಾರದು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಇದೇ ವೇಳೆ, ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ವಿವಿಧ ದೇವಾಲಯಗಳಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಕುಡುಪು ಶ್ರೀ ನರಸಿಂಹ ತಂತ್ರಿ ಹಾಗೂ ಅವರ ಪುತ್ರ ಕೃಷ್ಣರಾಜ ತಂತ್ರಿಯವರ ಶಿಷ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕುಡುಪು ತಂತ್ರಿದ್ವಯರನ್ನು ಆತ್ಮಿಯವಾಗಿ ಶಾಲು ಹೊದಿಸಿ ಗೌರವಿಸಿದರು.
ಕುಡುಪು ದೇವಸ್ಥಾನದ ಕೆ ಕೃಷ್ಣರಾಜ ತಂತ್ರಿ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಿ, ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿ ಎಲ್ಲರನ್ನೂ ಆತ್ಮೀಯವಾಗಿ ಕೊಂಡಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ ಎಸ್ ಮಹಾಬಲೇಶ್ವರ ಭಟ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ, ದೇವಳದ ಸಿಇಒ ಅರವಿಂದ ಸುತಗುಂಡಿ, ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದ ಮಂಗಳೂರು ಆಕಾಶವಾಣಿಯ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಸುದರ್ಶನ ಕುಡುಪು, ಅಚ್ಯುತ ಭಟ್, ಪ್ರಧಾನ ತಂತ್ರಿ ನರಸಿಂಹ ತಂತ್ರಿ, ಭಾಸ್ಕರ ಕೆ, ಬಾಲಕೃಷ್ಣ ಕಾರಂತ, ಮನೋಹರ ಭಟ್, ಪ್ರದೀಪ್ ಕುಮಾರ ಕಲ್ಕೂರ ಮೊದಲಾದವರು ಇದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
