ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾನುವಾರ ರಾತ್ರಿ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಜಮ್ಮುವಿನ ಅರ್ನಿಯಾ ಮತ್ತು ಆರ್‌ಎಸ್ ಪುರದಲ್ಲಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರ ಬಿಡಾರಗಳ ಮೇಲೆ ಪಾಕಿಸ್ತಾನ ಸೈನಿಕರು ನಿರಂತರ ಗುಂಡಿನ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ 2 ಗಂಟೆಯವರೆಗೂ ಶೆಲ್ ಮತ್ತು ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತೀಯ ಪಡೆಗಳು ದಿಟ್ಟ ಉತ್ತರ ನೀಡಿದ್ದು, ಗುಂಡಿನ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.
ದಾಳಿಯಲ್ಲಿನ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಕೇವಲ 24 ಗಂಟೆಗಳಲ್ಲಿ ಪಾಕಿಸ್ತಾನ 3ನೇ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಸ್ವಯಂ ಚಾಲಿತ ಮಿಶನ್ ಗನ್‌ನಿಂದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಕಳೆದೊಂದು ವಾರದಲ್ಲಿ ಪಾಕಿಸ್ತಾನಿ ಪಡೆಗಳು 10 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ರಕ್ಷಣಾ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಒಂದು ವಾರದ ಹಿಂದಷ್ಟೇ ಪಾಕಿಸ್ತಾನ ಮತ್ತು ಭಾರತ ದೇಶಗಳ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳು ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದ್ದವು. ಇದರ ಬೆನ್ನಲ್ಲಿಯೇ ಪಾಕಿಸ್ತಾನಿ ಪಡೆಗಳು ಭಾರತೀಯ ಪಡೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿವೆ.