ಮಂಗಳೂರು: ಮಂಗಳೂರು ಬಂದರಿನಿಂದ ಲಕ್ಷ ದ್ವೀಪಕ್ಕೆ ಸರಕು ತುಂಬಿಸಿ ತೆರಳುತ್ತಿದ್ದ ಹಡಗೊಂದು ಕಡಲಿನ ಭಾರೀ ಅಲೆಗೆ ಸಿಲುಕಿದ ಬಂಡೆಕಲ್ಲಿಗೆ ಬಡಿದು ಇಬ್ಭಾಗವಾಗಿ ನೀರುಪಾಲಾದ ಪರಿಣಾಮ ಆರು ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.
ಬೆಂಗ್ರೆ ನಿವಾಸಿ ಸಿ.ಪಿ.ಮುಸ್ತಫಾ ಮಾಲಕತ್ವದ ‘ವಶೀಲಾ’ ಹೆಸರಿನ ನೌಕೆಯು ಜ.29ರಂದು ಧಕ್ಕೆಯಿಂದ ಜಲ್ಲಿ, ಮರಳು, ಸಿಮೆಂಟ್, ದಿನಬಳಕೆ ಸಾಮಗ್ರಿಗಳು ಸೇರಿದಂತೆ ಸುಮಾರು 8 ರಿಂದ 10 ಲಕ್ಷ ರೂ. ಮೌಲ್ಯದ ಸರಕು ಹೊತ್ತುಕೊಂಡು ಹೊರಟಿತ್ತು. ಆದರೆ, ಇಂದು ಹಡಗಿನ ತಳಭಾಗ ಬಂಡೆಕಲ್ಲಿಗೆ ಬಡಿದು ಬಿರುಕು ಬಿಟ್ಟಿತ್ತು. ಪರಿಣಾಮ ನೀರು ಒಳಗೆ ನುಗ್ಗಲಾರಂಭಿಸಿತು. ಇದರಿಂದ ಎಚ್ಚೆತ್ತ ಸಿಬ್ಬಂದಿಗಳಾದ ಗುಜರಾತಿನ ಡಿಕ್ಕರ್, ಹಂಝ, ಕೇರಳ ಮೂಲದ ಕೃಷ್ಣ ಮತ್ತು ಬೀರನ್ ಹಾಗೂ ಮಂಗಳೂರಿನ ಬಶೀರ್ ಹಾಗೂ ಮೊಹಮ್ಮದ್ ಬಶೀರ್ ಅವರು ಮೀನುಗಾರರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಮೀನುಗಾರರು ಕ್ಷಿಪ್ರ ಕಾರ್ಯಾಚರಣೆಯಿಂದ ಅವರನ್ನು ರಕ್ಷಣೆ ಮಾಡಿದ್ದಾರೆ.
ಈ ಅವಘಡದಿಂದ 10 ಲಕ್ಷ ರೂ. ಮೌಲ್ಯದ ಸರಕು ಸೇರಿದಂತೆ ಸುಮಾರು 40 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

