ಬಂಟ್ವಾಳ: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳ ಗಡಿಭಾಗದಲ್ಲಿರುವ ಮಣಿನಾಲ್ಕೂರು ಮತ್ತು ತೆಕ್ಕಾರು ಗ್ರಾಮಗಳನ್ನು ಸಂಪರ್ಕಿಸುವ ಕೂಟೇಲುನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 4.02 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸೇತುವೆಯನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ಜಂಟಿಯಾಗಿ ಜ. 29ರಂದು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ರೈ ಅವರು, ಅಜಿಲಮೊಗರು ಮತ್ತು ಕಡೇಶಿವಾಲಯವನ್ನು ಸಂಪರ್ಕಿಸುವ ಸೌಹಾರ್ದ ಸೇತುವೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಶೀಘ್ರ ಶಿಲಾನ್ಯಾಸಗೊಳ್ಳಲಿದೆ ಎಂದರು.
ಮಣಿಹಳ್ಳದಿಂದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಗೆ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸಲು ಬೇಡಿಕೆಯಿದ್ದು, ಬೆಳ್ತಂಗಡಿ ಶಾಸಕರೊಡಗೂಡಿ ಅಭಿವೃದ್ಧಿ ಪಡಿಸುವ ಚಿಂತನೆ ಮಾಡಲಾಗುವುದು ಎಂದರು.
ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ಮಾತನಾಡಿ, ಸೇತುವೆ ಶಿಲಾನ್ಯಾಸ ಕಾರ್ಯಕ್ರಮ ಈ ಹಿಂದೆ ತೆಕ್ಕಾರು ಗ್ರಾಮದಲ್ಲಿ ನಡೆದಿದ್ದು, ಇದರ ಉದ್ಘಾಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಎರಡೂ ತಾಲೂಕುಗಳ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಉದಾಸೀನತೆಯಿಲ್ಲದೆ ಪ್ರಾಮಾಣಿಕವಾಗಿ ನಡೆಸಲಾಗಿದೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ನಾವೇ ತೆಂಗಿನಕಾಯಿ ಒಡೆಯುತ್ತೇವೆ ಎಂದು ವಿಪಕ್ಷದ ಟೀಕೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಬೆಳ್ತಂಗಡಿ ತಾಪಂ ಸದಸ್ಯೆ ಕೇಶವತಿ, ಉಷಾ, ತೆಕ್ಕಾರು ಗ್ರಾಪಂ ಉಪಾಧ್ಯಕ್ಷೆ ಸೀತಾ ತಿಮ್ಮಪ್ಪ ಪೂಜಾರಿ, ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಂಪತ್ ಕುಮಾರ್ ಶೆಟ್ಟಿ, ಎಪಿಎಂಸಿ ಸದಸ್ಯೆ ಕಾಂಚಲಾಕ್ಷಿ, ಗ್ರಾಪಂ ಸದಸ್ಯರಾದ ಶಿವಪ್ಪ ಪೂಜಾರಿಮ ಡೆನಿಸ್ ಮೊರಾಸ್, ಫಾರೂಕ್, ಪ್ರಮುಖರಾದ ಮುಹಮ್ಮದ್ ಹಾಜಿ ಬಾಂಬಿಲ, ಎಂ.ಟಿ. ಆದಂ, ನಾಭಿರಾಜ ಅಜಿಲ, ಬಾಲಕೃಷ್ಣ ಕೊಟ್ಟುಂಜ, ಸುಲೈಮಾನ್, ಅಬ್ದುಲ್ ಖಾದರ್ ಇಕ್ರಾ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಆದಂ ಕುಂಞ ಕಾರ್ಯಕ್ರಮ ನಿರೂಪಿಸಿದರು.
