ಬಂಟ್ವಾಳ : ಇಲ್ಲಿನ ಬಿ ಸಿ ರೋಡಿನ ಮೆಸ್ಕಾಂ ಕಚೇರಿ ಹಿಂಬದಿಯ ಕೈಕುಂಜೆ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕೊಳವೆ ಬಾವಿಯೊಂದು ಕೊರೆದು ಖಾಸಗಿ ಮಾಲಕತ್ವದ ಬಹು ಮಹಡಿ ಕಟ್ಟಡಕ್ಕೆ ನೀರು ಪೂರೈಸುವ ಪ್ರಯತ್ನಕ್ಕೆ ಸ್ಥಳೀಯ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಜ. 7ರಂದು ರಾತ್ರಿ ಒಂದು ಗಂಟೆಗೆ ಬೋರ್ವೆಲ್ ಕೊರೆಯುವ ಇಂಜಿನ್-ಲಾರಿ ಸ್ಥಳಕ್ಕೆ ಆಗಮಿಸಿ, ಬಾವಿ ಕೊರೆಯಲು ಆರಂಭಿಸಿತ್ತು. ಈ ಅಕ್ರಮದ ವಿರುದ್ಧ ನಾಗರಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬೋರ್ವೆಲ್ ಲಾರಿಯನ್ನು ಹಿಂದಕ್ಕೆ ಕಳುಹಿಸಿದ್ದರು.
ಆದರೆ ಖಾಸಗಿ ಕಟ್ಟಡದ ಮಾಲಕ ಪೊಲೀಸ್ ಮತ್ತು ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಜ. 27ರಂದು ಬೆಳಿಗ್ಗೆ ಪುನಾ ಸ್ಥಳಕ್ಕೆ ಆಗಮಿಸಿ, ಬೋರ್ವೆಲ್ ಕೊರೆಯಲು ಪ್ರಯತ್ನಿಸಿದ್ದು, ಮಹಿಳೆಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆಗ ಅಧಿಕಾರಿಗಳ ತಂಡ ಸ್ಥಳದಿಂದ ತೆರಳಿದ್ದರೂ ಸಂಜೆ ಹೊತ್ತಿಗೆ ಮತ್ತೊಂದು ಬಾರಿ ಸ್ಥಳಕ್ಕೆ ಆಗಮಿಸಿ, ಬೋರ್ವೆಲ್ ಕೊರೆಯಲು ವಿಫಲ ಪ್ರಯತ್ನ ಮಾಡಿದ್ದಾರೆ. ಆದರೆ ಈ ತಂಡ ಜ. 7 ರಂತೆ ಶನಿವಾರ ರಾತ್ರಿ ಬೋರ್ವೆಲ್ ಕೊರೆಯುವ ಸಾಧ್ಯತೆ ಇದೆ. ಈ ಅಕ್ರಮದಲ್ಲಿ ಬಂಟ್ವಾಳ ಪುರಸಭೆಯ ಕೆಲವು ಅಧಿಕಾರಿಗಳು ಹಾಗೂ ಪೊಲೀಸರು ಶಾಮೀಲಾಗಿದ್ದಾರೆಂದು ಎಂದು ಸ್ಥಳೀಯ ನಾಗರಿಕರೊಬ್ಬರು ದೂರಿದ್ದಾರೆ.
