ಕೈಕಂಬ: ದೇಶದ ಉಳಿವು ಹಾಗೂ ರಕ್ಷಣೆಗಾಗಿ ನಮ್ಮ ಉಸಿರನ್ನು ಸಮರ್ಪಿಸಲು ಸದಾ ಸಿದ್ಧ ಎಂದು ಅಬ್ದುಲ್ ಅಝೀಝ್ ದಾರಿಮಿ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಬಾಲ್ಮೀ ಶಾಲಾ ಎದುರು ಮೈದಾನದಲ್ಲಿ ಎಸ್ಕೆಸ್ಸೆಸೆಫ್ ವತಿಯಿಂದ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರದ ರಕ್ಷಣೆಗಾಗಿ ಇಲ್ಲಿ ಸೇರಿರುವ ವಿದ್ಯಾರ್ಥಿ ಸಂಘಟನೆಗಳ ನಾಯಕರು ಕೇಸರಿ, ಬಳಿ ಹಾಗೂ ಹಸಿರುನೊಂದಿಗೆ ಯಾವಾ ಕಾಲದಲ್ಲೂ ಒಂದಾಗುವೆವು ಎಂಬ ಸಂದೇಶವನ್ನು ಸಭೆಯ ಮೂಲಕ ಸಾರುತ್ತಿದ್ದಾರೆ. ರಾಷ್ಟ್ರ ಪ್ರೇಮ ಎನ್ನುವುದು ನಮ್ಮ ರಕ್ತಗತವಾದ ಸಂಗತಿಯಾಗಿದ್ದು, ನಮ್ಮ ರಾಷ್ಟ್ರ ರಕ್ಷಣೆಗೆ ಎಷ್ಟು ಬದ್ಧವೊ ಅಷ್ಟೇ ನಮ್ಮ ರಾಷ್ಟ್ರ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಬಲಿಷ್ಠ ಸಂವಿಧಾನ, ಕಾನೂನು ಜಾರಿಯಾಗಬೇಕಾದರೆ ಪ್ರಬುದ್ಧ ಜನತೆ ಹಾಗೂ ಸಮಾಜ ಅನಿವಾರ್ಯವಾಗಿದೆ ಎಂದ ಅವರು, ಕೋಮುವಾದ, ಭಯೋತ್ಪಾದನೆ ಹಾಗೂ ಮತೀಯವಾದಕ್ಕೆ ರಾಜಿ ಮಾಡದೆ ಇದರ ವಿರುದ್ಧ ಹೋರಾಡಿ ಮುನ್ನುಗ್ಗುತ್ತೇವೆ. ಇದಕ್ಕಾಗಿ ಸುಜ್ಞಾನ, ವಿನಯ, ಸೇವೆ ಎಂಬ ಧ್ಯೇಯದಿಂದ ರಾಷ್ಟ್ರದ ಸಮ್ಮಿಲನಕ್ಕಾಗಿ ಈ ಸಭೆ ಒಗ್ಗೂಡಿದೆ ಎಂದು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಈ ದೇಶದ ಸಾರಭೌಮತೆ, ಅಖಂಡತೆಯನ್ನು ಉಳಿಸಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದ್ದು, ಇದಕ್ಕಾಗಿ ಎಲ್ಲರೂ ಸೌಹಾರ್ದತೆಯನ್ನು ಮೈಗೂಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕೇಮಾರು ಮಠದ ಶ್ರೀ ವಿಠಲದಾಸ ಸ್ವಾಮೀಜಿ ಮಾತನಾಡಿ, ಐಎಎಸ್ ಮತ್ತಿತರ ದೊಡ್ಡ ದೊಡ್ಡ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ದೇಶ ಪ್ರೇಮ ಹುಟ್ಟುವುದು, ಬದಲಾಗಿ ಅನಕ್ಷರಸ್ಥರಿಂದ ಅಲ್ಲ ಎನ್ನುವುದನ್ನು ನಾವು ಗ್ರಹಿಸಿದ್ದೇವೆ. ಇದು ಶುದ್ಧ ಸುಳ್ಳು ಎಂದ ಅವರು, ಕನ್ನಡ ಶಾಲೆ ನಮ್ಮ ಸಂಸ್ಕೃತಿ ಬಿಂದುವಾಗಿದ್ದು, ಇದನ್ನೇ ಮುಚ್ಚಿದರೆ ಸಂಸ್ಕೃತಿಯನ್ನೇ ಮುಚ್ಚಿದಂತೆ ಎಂದು ಆತಂಕ ವ್ಯಕತಡಿಸಿದರು.

ತಂತ್ರಜ್ಞಾನ ಯುಗದಲ್ಲಿ ದಾರಿ ತಪ್ಪುತ್ತಿರುವ ಮಕ್ಕಳಿಗೆ ನೈತಿಕ ಹಾಗೂ ಸಂಸ್ಕಾರವುಳ್ಳ ಶಿಕ್ಷಣವನ್ನು ಪೋಷಕರು ಕೊಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಸಲಹೆ ನೀಡಿದರು.ಇಂತಹ ಸಭೆ ಮಾತ್ರ ಮಾಡುವುದಲ್ಲದೆ ಬಡವರಿಗೆ ಸಹಾಯ ಮಾಡುವ ಮೂಲಕ ಅವರಿಗೆ ಸ್ಪಂದಿಸಿ ಎಂದು ಇದೇ ವೇಳೆ ಮನವಿ ಮಾಡಿದರು.
ಈ ವೇಳೆ ಎಸ್ಕೆಸ್ಸೆಸೆಫ್ ಸದಸ್ಯತ್ವ ಅಭಿಯಾನ ಸಮಿತಿಯ ಅಸೈಯ್ಯದ್ ಅಮೀರ್ ಕಿನ್ಯಾ ಅವರು “ಸತ್ಯದಾರ” ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಚೇರ್ ಮ್ಯಾನ್ ರಿಯಾಝ್ ಮಿಲನ್ ಅವರನ್ನು ಸಚಿವ ರಮಾನಾಥ ರೈ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಎಸ್ಕೆಸ್ಸೆಸೆಫ್ ಅಧ್ಯಕ್ಷ ಇಸ್ಹಾಕ್ ಫೈಝಿ ಪ್ರತಿಜ್ಞಾ ಭೋದಿಸಿದರೆ, ಸಿದ್ದೀಕ್ ಅಬ್ದುಲ್ ಖಾದರ್ ನಿರ್ಣಯ ಮಂಡಿಸಿದರು. ದ.ಕ ಜಿಲ್ಲಾ ಎಸ್ಕೆಸ್ಸೆಸೆಫ್ ಉಪಾಧ್ಯಕ್ಷ ಝಾಸಿಂ ದಾರಿಮಿ, ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ, ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಉಸ್ಮಾನ್ ದಾರಿಮಿ ಬಂಟ್ವಾಳ, ಹುಸೈನ್ ದಾರಿಮಿ ರೆಂಜಲಾಡಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಅಬ್ಬಾಸ್ ದಾರಿಮಿ, ಇಸ್ಮಾಯೀಲ್ ದಾರಿಮಿ, ಶಾಫಿ ದಾರಿಮಿ ಸುಳ್ಯ, ಹಕೀಂ ಪರ್ತಿಪಾಡಿ, ಸುಲಯಮಾನ್ ಫೈಝಿ, ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ ಮತ್ತಿತರರು ಭಾಗವಹಿಸಿದ್ದರು.
ಮೊಹಮ್ಮದ್ ಕುಂಞಿ ಮಾಸ್ಟರ್ ಸ್ವಾಗತಿಸಿ, ಇರ್ಫಾನ್ ಮುಸ್ಲಿಯಾರ್ ಕಲಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.
ಜಾಥಾ: ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಸುರಲ್ಪಾಡಿಯಿಂದ ಬಾಲ್ಮೀ ಮೈದಾನವರೆಗೆ ನಡೆದ ಬೃಹತ್ ಜಾಥಾಕ್ಕೆ ಅಲ್ ಹಾಜ್ ವಿ.ಕೆ. ಅಬುಬಕ್ಕರ್ ಮುಸ್ಲಿಯಾರ್ ಚಾಲನೆ ನೀಡಿದರು. ಈ ವೇಳೆ ಶಾಸಕ ಮೊಹಿದ್ದೀನ್ ಬಾವಾ ಹಾಗೂ ಮತ್ತಿತರರಿದ್ದರು.







