ಬಂಟ್ವಾಳ: ಬಿಜೆಪಿ ಎಂದಿಗೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಮಾತ್ರ ಓಟಿಗಾಗಿ ಜಿಲ್ಲೆಯಲ್ಲಿ ಮತೀಯ ಗಲಭೆ ಸೃಷ್ಠಿಸುತ್ತಿದೆ. ರಾಜ್ಯದಲ್ಲಿ ಅತೀ ಉತ್ಸಾಹದಿಂದ ಟಿಪ್ಪು ಜಯಂತಿ ಆಚರಿಸಿದ ಮುಖ್ಯಮಂತ್ರಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲು ಮರೆತಿದೆ. ಇದಕ್ಕಾಗಿ ಬಂಟ್ವಾಳ ಕ್ಷೇತ್ರದಲ್ಲಿ ಕಮಲ ಅರಳಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಭಾನುವಾರ ರಾತ್ರಿ ಸಿದ್ಧಕಟ್ಟೆ ಸಮೀಪದ ಕರ್ಪೆಯಲ್ಲಿ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಮತ್ತು ಗ್ರ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪ್ಪಾಡಿ ಮಾತನಾಡಿ, ಆರ್‍ಎಸ್‍ಎಸ್ ಮತ್ತು ಬಿಜೆಪಿಗೆ ಉಗ್ರರ ಪಟ್ಟ ಕಟ್ಟಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್‍ಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಮಾತನಾಡಿದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿ.ಆನಂದ, ಪ್ರದೀಪ್ ಕುಮಾರ್ ಅಡ್ಯಾರ್, ಕೆ.ರತ್ನಕುಮಾರ್ ಚೌಟ, ವಸಂತ ಕುಮಾರ್ ಅಣ್ಣಳಿಕೆ, ಸಂತೋಷ ಕುಮಾರ್ ಬೆಟ್ಟು, ಸಂದೇಶ ಶೆಟ್ಟಿ ಪೊಡುಂಬ, ರೊನಾಲ್ಡ್ ಡಿಸೋಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಪೂಜಾರಿ, ಉಮೇಶ ಗೌಡ, ರಾಜೇಂದ್ರ ಪೂಜಾರಿ ನೆಕ್ಲಾಜೆ, ದೋಗ ಪೂಜಾರಿ, ಚೇತನ್, ತೇಜಸ್ ಮತ್ತಿತರರು ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ. ಅರಳ ಸ್ವಾಗತಿಸಿ, ವಂದಿಸಿದರು.
